ಮಳೆ ಚೆಲ್ಲಾಟ-ಜನರ ಪರದಾಟ

ಲಕ್ಷ್ಮೇಶ್ವರ,ಸೆ15 ತಾಲ್ಲೂಕಿನಾದ್ಯಂತ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮಣ್ಣಿನ ಮಾಳಿಗೆಗಳು ಸೋರುತ್ತಿದ್ದು ಕೆಲ ಕಡೆ ಮನೆಗಳು ಬೀಳುತ್ತಿವೆ. ಸಮೀಪದ ಶಿಗ್ಲಿಯಲ್ಲಿ ವಿಎಸ್‍ಎಸ್ ಬ್ಯಾಂಕಿನ ಅಧ್ಯಕ್ಷ ಸಿದ್ದಣ್ಣ ಯಲಿಗಾರ ಅವರ ಮನೆಯ ಮೇಲ್ಛಾವಣಿ ಸೋಮವಾರ ಕುಸಿದು ಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.
ಅದರಂತೆ ಉಂಡೇನಹಳ್ಳಿ, ದೊಡ್ಡೂರು, ಲಕ್ಷ್ಮೇಶ್ವರ, ಗೊಜನೂರು, ಯಳವತ್ತಿ, ಮಾಡಳ್ಳಿ, ಬಸಾಪುರ ಗ್ರಾಮಗಳಲ್ಲಿ ಮನೆಗಳು ಸೋರುತ್ತಿದ್ದು ಜನರು ಪರದಾಡುತ್ತಿದ್ದಾರೆ. ಮನೆ ಸೋರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಪ್ಲಾಸ್ಟಿಕ್ ಹಾಳೆಯನ್ನು ಖರೀದಿಸಿ ಮನೆ ಮಾಳಿಗೆಗೆ ಹೊದಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತಿದೆ.
ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಗೆ ಹೊಲಗಳಲ್ಲಿ ನೀರು ನಿಲ್ಲುತ್ತಿದ್ದು ಇದರಿಂದಾಗಿ ಕೊಯ್ಲಿಗೆ ಬಂದಿರುವ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹೂ ಬಿಡುತ್ತಿರುವ ಮೆಣಸಿನಕಾಯಿ ಗಿಡಗಳು ಕೊಳೆಯುತ್ತಿವೆ. ಕಂಠಿಶೇಂಗಾ ಬಳ್ಳಿಯಲ್ಲಿಯೇ ಮೊಳಕೆ ಒಡೆಯುತ್ತಿದೆ. ಹೀಗೆಯೇ ಮಳೆ ಮುಂದುವರೆದರೆ ರೈತರು ಮತ್ತು ಜನರು ಸಂಕಷ್ಟು ಎದುರಿಸಬೇಕಾಗುತ್ತದೆ.