ಮಳೆ ಕೊರತೆಯಿಂದ ಬೆಳೆ ನಷ್ಟ:ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯ

ಸಿರಾ, ಆ. ೨೯- ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಿ, ಬೆಳೆ ನಷ್ಟ ಪರಿಹಾರ ಸೇರಿದಂತೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಆಗ್ರಹಿಸಿದ್ದಾರೆ.
ಮಳೆಯ ಅಭಾವದಿಂದ ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣವಾಗುತ್ತಿದ್ದು, ರೈತರು ಸಂಕಷ್ಟದಲ್ಲಿರುವುದನ್ನು ಗಮನಿಸಿದ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ. ಗೌಡ, ತಾಲ್ಲೂಕಿನ ತೊಗರುಗುಂಟೆ, ಉಗಣೆಕಟ್ಟೆ ಗೇಟ್, ಬರಗೂರು, ಗೋಪಿಕುಂಟೆ, ಯಾದಲಡಕು, ದೊಡ್ಡಬಾಣಗೆರೆ, ನಾರಗೊಂಡನಹಳ್ಳಿ, ವಾಜರಹಳ್ಳಿ, ಎಂಜಲಗೆರೆ, ಎಂ.ಕೆ ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಮಳೆಯ ಅಭಾವದಿಂದ ಸಿರಾ ತಾಲ್ಲೂಕಿನ ಪ್ರಮುಖ ಬೆಳೆಯಾದ ಶೇಂಗಾ ಸಂಪೂರ್ಣ ಹಾಳಾಗಿದ್ದು, ಇದನ್ನು ಸರ್ಕಾರದ ಗಮನಕ್ಕೆ ತಂದು ರೈತರಿಗೆ ನ್ಯಾಯ ಕೊಡಿಸುವ ಸಲುವಾಗಿ ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ, ರೈತರೊಂದಿಗೆ ಬೆಳೆ ಸಮೀಕ್ಷೆ ನಡೆಸಿದರು.
ಮಳೆಯ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಅದರಲ್ಲೂ ಬಯಲುಸೀಮೆ ಪ್ರದೇಶವಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭೀಕರ ಬರಗಾಲ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಲವು ಜಿಲ್ಲೆಗಳಲ್ಲಿ ಮಳೆ ಬಾರದೆ ರೈತರು ಬಿತ್ತಿದ್ದ ಬೆಳೆಗಳು ಒಣಗಿ ಹೋಗಿವೆ. ಸ್ಥಳೀಯ ಶಾಸಕರು ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ತಕ್ಷಣ ವರದಿ ಪಡೆದು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಶೇಂಗಾ ಬೆಳೆಗಳ ನಾಡು ಎಂದೆ ಪ್ರಸಿದ್ಧಿಯಾಗಿರುವ ಸಿರಾ, ಪಾವಗಡ, ಮಧುಗಿರಿ, ಕೊರಟಗೆರೆ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಸೇರಿದಂತೆ ಈ ಪ್ರದೇಶಗಳಲ್ಲಿ ಶೇಂಗಾ ಬಿತ್ತನೆ ಮಾಡಿರುವ ರೈತರು ಸಕಾಲಕ್ಕೆ ಮಳೆ ಬಾರದೆ ಸಂಪೂರ್ಣ ಬೆಳೆ ನಷ್ಟ ಎದುರಿಸುತ್ತಿರುವ ಸ್ಥಿತಿಯನ್ನು ಭೇಟಿ ಕೊಟ್ಟ ಈ ಸಂದರ್ಭದಲ್ಲಿ ಗಮನಿಸಿದ್ದೇನೆ. ಅದರಲ್ಲೂ ಪ್ರಮುಖವಾಗಿ ಸಿರಾ ತಾಲ್ಲೂಕಿನ ಜನ ಶೇಂಗಾವನ್ನೇ ನಂಬಿ ಬದುಕುತ್ತಿದ್ದಾರೆ. ಈ ವರ್ಷ ಬಿತ್ತನೆಯೂ ಕೂಡಾ ಕಡಿಮೆ ಪ್ರಮಾಣದಲ್ಲಿದೆ. ರೈತರು ಸಾಲ-ಸೂಲ ಮಾಡಿ ಹಾಕಿರುವ ಬೆಳೆಯು ಕೂಡಾ ಕೈಗೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುವ ಹಂತದಲ್ಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಿ, ಬರಗಾಲ ತಾಲ್ಲೂಕೆಂದು ಘೋಷಿಸಿ ಬೆಳೆ ನಷ್ಟ ಪರಿಹಾರ ಸೇರಿದಂತೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಶೇಂಗಾ ಬೆಳೆಯು ಸಂಪೂರ್ಣ ನಷ್ಟವಾಗಿರುವುದರಿಂದ ವಿಮೆ ಹಣ ಪಾವತಿಸಿರುವ ಹಾಗೂ ಸಂಕಷ್ಟದ ಕಾರಣದಿಂದ ಪಾವತಿಸದೇ ಇರುವ ಎಲ್ಲ ರೈತರಿಗೆ ಯಾವುದೇ ತಾರತಮ್ಯ ಮಾಡದೆ ಸಂಪೂರ್ಣ ಬೆಳೆ ನಷ್ಟ ಪರಿಹಾರ ಘೋಷಣೆ ಮಾಡಿ ಕೂಡಲೇ ಬೆಳೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತೊಗರುಗುಂಟೆ ಗ್ರಾಮ ಪಂಚಾಯ್ತಿ ಸದಸ್ಯರಾದ ನರಸಿಂಹಮೂರ್ತಿ, ಮುದ್ದರಂಗನಹಳ್ಳಿ, ಗ್ರಾಂ.ಪಂ. ಸದಸ್ಯ ಎಂ. ಶಿವಲಿಂಗಯ್ಯ, ಮದಲೂರು ಗ್ರಾಂ.ಪಂ. ಮಾಜಿ ಅಧ್ಯಕ್ಷ ಈರಣ್ಣ ಪಟೇಲ್, ಗೋಪಿಕುಂಟೆ ಗ್ರಾಂ.ಪಂ. ಸದಸ್ಯರಾದ ಪ್ರಸನ್ನಕುಮಾರ್, ಮಂಡಿ ಮರ್ಚೆಂಟ್ ರವಿ, ಹೊಸಹಳ್ಳಿ ಸಿದ್ದಲಿಂಗಪ್ಪ, ಇಂಜಿನಿಯರ್ ರಂಗನಾಥ್, ಚಿಕ್ಕನಕೋಟೆ ಕರಿಯಣ್ಣ, ವಾಜರಹಳ್ಳಿ ವೆಂಕಟೇಶ್, ನರಸಿಂಹಗೌಡ, ಕೃಷ್ಣೆಗೌಡ, ಯಾದಲಡುಕು ಚಿದಾನಂದ್, ನಾಗರಾಜ್, ನಿವೃತ್ತ ಶಿಕ್ಷಕರಾದ ಕುಮಾರ್, ರೇಣುಕಾಪ್ರಸಾದ್, ಎಂ.ಕೆ. ಪಾಳ್ಯ ಚಿಕ್ಕಸಿದ್ದಪ್ಪ, ಯುವ ಮುಖಂಡ ಯುವರಾಜ್, ಕಾಟನಹಳ್ಳಿ ಭಾಸ್ಕರ್, ಜಿ.ಎನ್. ಮೂರ್ತಿ, ದೊಡ್ಡ ಬಾಣಗೆರೆ ಶ್ರೀಧರ್, ದಯಾನಂದ್, ಮತ್ತಿತರರು ಉಪಸ್ಥಿತರಿದ್ದರು.