ಮಳೆ ಕಣ್ಣಾಮುಚ್ಚಾಲೆ

ಬೆಂಗಳೂರು, ಸೆ ೩- ರಾಜ್ಯದಲ್ಲಿ ಹಲವೆಡೆ ವರಣನ ಆರ್ಭಟ ಜೋರಾಗಿದ್ದರೇ, ಇನ್ನು ಕೆಲವೆಡೆ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಗದಗ, ಧಾರವಾಡ ,ಯಲ್ಲಾಪುರ ಪ್ರದೇಶಗಳಲ್ಲಿ ವರಣ ತನ್ನ ಆರ್ಭಟ ಮುಂದುವರೆಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿದೆಡೆ ಮಳೆ ಕೊಂಚ ತಗ್ಗಿದೆ. ಮಳೆಯ ಪ್ರಮಾಣ ಕೊಂಚ ಕಡಿಮೆಯಾದ ಪರಿಣಾಮ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗದಗ, ಧಾರವಾಡ, ಹುಬ್ಬಳ್ಳಿ, ವಿಜಯಪುರ, ಬೆಳಗಾವಿ ಮತ್ತು ಬೀದರ್ ಗಳಲ್ಲಿಯೂ ಇಂದು ಮಳೆಯಾಗುವ ನಿರೀಕ್ಷೆಗಳಿವೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ೨೯ ಮತ್ತು ಕನಿಷ್ಠ ೨೧ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.
ಯಲ್ಲಾಪುರ ತಾಲೂಕಿನ ವಿವಿಧೆಡೆ ವಾರದಿಂದ ವ್ಯಾಪಕ ಮಳೆ ಸುರಿದಿದೆ. ಇದರಿಂದ ಗಣೇಶ ಚತುರ್ಥಿಯ ಸಂಭ್ರಮಕ್ಕೆ ನೀರೆರಚಿದಂತಾಗಿದೆ. ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆನೀರು ತುಂಬಿ, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸರ್ಕಾರಿ ಪ.ಪೂ. ಕಾಲೇಜಿನ ಬಳಿ ಎರಡು ವಿದ್ಯುತ್‌ಕಂಬಗಳು ಮುರಿದ ಪರಿಣಾಮ ವಿದ್ಯುತ್‌ವ್ಯತ್ಯಯವಾಗಿದೆ
ಕರ್ನಾಟಕದ ಎಲ್ಲ ಭಾಗಗಳಲ್ಲಿ ಆಗಸ್ಟ್ ತಿಂಗಳಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಿದ್ದು, ಮಳೆಗೆ ಕರ್ನಾಟಕ ತತ್ತರಿಸಿದೆ.