ಮಳೆ ಆರ್ಭಟ: ಗ್ರಾಮಗಳ ಮುಳುಗಡೆ ಆತಂಕ

ಮಧುಗಿರಿ, ಆ. ೫- ಇತ್ತೀಚಿಗೆ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಗಡಿಭಾಗದ ಹಳ್ಳಿಗಳು ಅಕ್ಷರಶಃ ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ತಾಲ್ಲೂಕಿನ ಗಡಿಭಾಗದ ಮುದ್ದೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಆಂಧ್ರ ಗಡಿಭಾಗದ ಜಲತಿಮ್ಮನಹಳ್ಳಿ ಗ್ರಾಮದ ಸುತ್ತಲ್ಲೂ ಮಳೆ ನೀರು ಶೇಖರಣೆಯಾಗುತ್ತಿದ್ದು ಇದೇ ರೀತಿ ಮಳೆ ಬಂದರೆ ಈ ಗ್ರಾಮ ಮುಳುಗಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದೂಪುರಕ್ಕೆ ತೆರಳುವ ಮಾರ್ಗ ರಸ್ತೆಯಲ್ಲಿ ಕಡಗತ್ತೂರು, ನಾಗೇನಹಳ್ಳಿ ವ್ಯಾಪ್ತಿಯ ಹಳ್ಳದ ನೀರು ಕಾಲುವೇ ಮೂಲಕ ಜಲತಿಮ್ಮನಹಳ್ಳಿ ಗಡಿಯಲ್ಲಿ ನೀರು ಶೇಖರಣೆಯಾಗಿ ಆವರಿಸಿಕೊಂಡಿದ್ದು ಮತ್ತೊಂದೆಡೆ ಕಸಿನಾಯಕನಹಳ್ಳಿ ಮಾರ್ಗದದಲ್ಲಿ ಕುಮದ್ವತಿ ನೀರು ಆವರಿಸಿಕೊಳ್ಳುತ್ತಿರುವ ಕಾರಣ ಈ ಗ್ರಾಮದ ಜನತೆ ಹೊರಗಡೆ ಹೋಗಿ ಬರುಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಜನರು ಹೊಟ್ಟೆಪಾಡಿಗೆ ಕೂಲಿ ಮಾಡಲು ಹೋಗದ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಶಾಲೆಗೆ ತೆರಳುತ್ತಿಲ್ಲ ಈ ಗ್ರಾಮಕ್ಕೆ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿವೆ.
ಕರ್ನಾಟಕ ರಾಜ್ಯದಲ್ಲಿ ಈ ಗ್ರಾಮವನ್ನು ಕೇವಲ ಮತದಾನ ಹಾಗೂ ಪಡಿತರ ಪಡೆಯಲು ಮಾತ್ರ ಅರ್ಹರಾಗಿದ್ದು ಇತರೆ ಯಾವುದೆ ಸೌಕರ್ಯಗಳು ಕಲ್ಪಿಸದೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ.
ಯಾರೇ ಶಾಸಕರಾಗಿ ಬಂದರು ಹಣ, ಹೆಂಡ ಹಂಚಿ ಕೇವಲ ಆಶ್ವಾಸನೆಗಳನ್ನು ನೀಡಿ ಹೋಗುತಿದ್ದು, ಕನಿಷ್ಠ ಗಡಿಭಾಗದ ಜನತೆ ನೋವು ಆಲಿಸುವವರಿಲ್ಲ. ಬಹುತೇಕ ಈ ಭಾಗದ ಜನತೆ ಸೀಮಾಂಧ್ರದ ಹಿಂದೂಪುರದ ಮೇಲೆ ಅವಲಂಭಿತವಾಗಿದ್ದು ಪ್ರಸ್ತುತ ಮಳೆಯಿಂದ ಯಾವ ದಿಕ್ಕಿಗೂ ಸಾಗದೆ ಸುತ್ತಲೂ ನೀರು ಆವರಿಸಿಕೊಂಡಿದೆ. ನಮ್ಮ ಮಕ್ಕಳಿಗೆ ಹೊಟ್ಟೆಗೆ ಏನು ಕೊಡಬೇಕು ಇದು ಶಾಪವೋ ಅಥವ ಪಾಪವೋ ಎಂದು ಇಲ್ಲಿನ ಜನ ಕಣ್ಣಿರುಡುವಂತಾಗಿದೆ.
ಈ ಸಮಸ್ಯೆ ಬಗ್ಗೆ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಗಮನಕ್ಕೆ ಹಲವು ಬಾರಿ ತಂದರೂ ಯಾರೊಬ್ಬರು ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ಚುನಾವಣೆ ವೇಳೆ ಮಾತ್ರ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಗ್ರಾಮವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಪ್ರತಿ ನಿತ್ಯ ಬೆಳಗಾದರೆ ನಾವು ಆಂಧ್ರಕ್ಕೆ ತೆರಳಲೇಬೇಕು. ಕನಿಷ್ಠ ಹಾಲು, ತರಕಾರಿ ಖರೀದಿ ಮಾಡದ ಸ್ಥಿತಿ ನಿರ್ಮಾಣವಾಗಿದ್ದು ಈ ಗ್ರಾಮಕ್ಕೆ ಕರ್ನಾಟಕ್ಕಿಂತ ಆಂಧ್ರ ನಂಟು ಹೆಚ್ಚಾಗಿದ್ದು ಕರ್ನಾಟಕ ಸರ್ಕಾರದಿಂದ ಕನಿಷ್ಠ ಸೌಕರ್ಯಗಳು ನಮಗೆ ಸಿಗುತ್ತಿಲ್ಲ ಎಂದು ಸ್ಥಳಿಯ ನಿವಾಸಿ ಶಂಕರ್ ಆರೋಪಿಸಿದ್ದಾರೆ.
ಮುದ್ದೇನಹಳ್ಳಿ ಗ್ರಾಮದ ಬಳಿ ನಿವೇಶನ ಕೊಡುತ್ತೇವೆ ಎಂದು ಆಶ್ವಾಸನೆ ಕೊಟ್ಟು ನಾಲ್ಕು ವರ್ಷ ಕಳೆದಿದೆ. ಹಾಲಿ-ಮಾಜಿ ಶಾಸಕರು ಕನಿಷ್ಠ ಒಮ್ಮೆಯು ಭೇಟಿ ಕೊಟ್ಟಿಲ್ಲ, ಸುಖ ಸಂತೋಷ ಎಂಬುದನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸುನಂದಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕು.