ಮಳೆ ಆರ್ಭಟ : ಕೋಡಿ ಬಿದ್ದ ಗುಡೇಕೋಟೆ ಕೆರೆ, ಅಲ್ಲಲ್ಲಿ ಮನೆಗಳ ಹಾನಿ,


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 7 :- ಕಳೆದ ರಾತ್ರಿಯಿಂದ ಇಂದು ನಸುಕಿನ ಜಾವದವರೆಗೆ ಸುರಿದ ಮಳೆ ಆರ್ಭಟದಿಂದ ತಾಲೂಕಿನ ಗುಡೇಕೋಟೆ ಕೆರೆಯೊಂದು ಕೋಡಿ ಬಿದ್ದಿದ್ದು ಅಲ್ಲಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ಬಿದ್ದಿರುವ ಬಗ್ಗೆ ಮಾಹಿತಿ ತಿಳಿದಿದೆ.
ರಾಜ್ಯಾದ್ಯಾಂತ ಮಳೆಯ ಆರ್ಭಟ ಜೋರಾಗಿದ್ದು ತಾಲೂಕಿನಲ್ಲಿ ಕಳೆದೆರಡು ದಿನದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ಹೆಚ್ಚಾಗಿ ಬೆಳೆ ಹಾನಿಯಾಗದಿದ್ದರು ಹಳೇ ಮನೆಗಳ ಗೋಡೆಗಳು ಕುಸಿದು ಬಿದ್ದಿರುವ ಮಾಹಿತಿ ಲಭ್ಯವಾಗುತ್ತಿದ್ದು ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿರುವುದಿಲ್ಲ. ತಾಲೂಕಿನ ಗುಡೇಕೋಟೆ ಹೋಬಳಿಯಲ್ಲಿ ವಾರದ ಹಿಂದಷ್ಟೇ ರಾಮದುರ್ಗ ಕೆರೆ ತುಂಬಿ ಕೋಡಿ ಬಿದ್ದ ವರದಿಯಾಗಿತ್ತು ಇಂದು ಗುಡೇಕೋಟೆ ಕೆರೆ ತುಂಬಿ ಕೋಡಿ ಬಿದ್ದಿದೆ ಇದರಿಂದ ರೈತರ ಮೊಗದಲ್ಲಿ ಸಂತಸ ಕಾಣುತಿದೆ.
ತಾಲೂಕಿನ ಜರ್ಮಲಿಯಲ್ಲಿ ಮೂರು, ರಾಮದುರ್ಗ ಮತ್ತು ಕುದುರೆಡವು ಗ್ರಾಮದಲ್ಲಿ ತಲಾ ಎರಡು ಮನೆಗಳು ಬಿದ್ದಿದ್ದು ಹಾಗೂ ಕಾಟ್ರಹಳ್ಳಿ, ಬೆಳಗಟ್ಟ, ಅಮಲಾಪುರ, ಪಿಚ್ಚಾರಹಟ್ಟಿಯಲ್ಲಿ ತಲಾ ಒಂದೊಂದು  ಮನೆ ಬಿದ್ದಿವೆ  ಎಂದು ತಾಲೂಕು ಕಛೇರಿ ಮಾಹಿತಿಯಂತೆ ಹತ್ತಕ್ಕೂ ಹೆಚ್ಚು ಮನೆಗಳು ಬಿದ್ದಿರುವ ತಿಳಿದಿವೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಹೇಳಬಹುದಾಗಿದೆ.
ಕೂಡ್ಲಿಗಿ ತಾಲೂಕಿನಲ್ಲಿ ಮಳೆಪ್ರಮಾಣ  : ಕಳೆದ ರಾತ್ರಿಯಿಂದ ಇಂದು ನಸುಕಿನ ಜಾವದವರೆಗೆ ಸುರಿದ ಮಳೆ ಪ್ರಮಾಣದಲ್ಲಿ ಗುಡೇಕೋಟೆಯಲ್ಲಿ 72.1 ಮಿ ಮೀ ನಷ್ಟು ಅತೀಹೆಚ್ಚು ಮಳೆಯಾಗಿದ್ದು ಉಳಿದಂತೆ ಕೂಡ್ಲಿಗಿ -14.5 ಮಿ ಮೀ, ಹೊಸಹಳ್ಳಿ – 22.4 ಮಿ ಮೀ, ಬಣವಿಕಲ್ಲು – 26.1ಮಿ ಮೀ, ಚಿಕ್ಕಜೋಗಿಹಳ್ಳಿ – 19.4 ಮಿ ಮೀ ನಷ್ಟು ಮಳೆ ಸುರಿದ ಬಗ್ಗೆ ತಿಳಿದಿದೆ