ಮಳೆ ಆರ್ಭಟಕ್ಕೆ ನಡುಗಿದ ಸಿಲಿಕಾನ್ ಸಿಟಿ


ಬೆಂಗಳೂರು, ಅ.೪- ಶಾಹೀನ್ ಚಂಡಮಾರುತದ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ಬಡಾವಣೆ, ರಸ್ತೆಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡಿ ಜಾಗರಣೆ ಮಾಡುವಂತಾಯಿತು. ಮಳೆಯಿಂದ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಗುಡುಗು ಮಿಂಚು ಸಹಿತ ಸುರಿದ ಮಳೆಯಿಂದಾಗಿ ಆರ್‌ಆರ್ ನಗರದಲ್ಲಿ ಅಪಾರ ಹಾನಿ ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ರಾಜಕಾಲುವೆಯಿಂದ ನೀರು ನುಗ್ಗಿ ೧೦ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಏಕಾಏಕಿ ದನದ ಕೊಟ್ಟಿಗೆಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಮೂಕ ಪ್ರಾಣಿಗಳನ್ನು ಉಳಿಸಲು ಸಾಧ್ಯವಾಗಲೇ ಇಲ್ಲ. ನೀರಿನ ರಭಸಕ್ಕೆ ಹಸುಗಳು, ಮೇಕೆಗಳು ಕೊಚ್ಚಿ ಹೋಗಿವೆ. ತಮ್ಮ ಕಣ್ಮುಂದೆಯೇ ಜಾನುವಾರುಗಳು ನೀರು ಪಾಲಾಗುತ್ತಿರುವುದು ಕಂಡು ಮಾಲೀಕರು ಮಮ್ಮಲ ಮುರುಗಿದ ದೃಶ್ಯ ಕಂಡು ಬಂತು.
ರಾಜಕಾಲುವೆ ಸಮೀಪ ನೆಲೆಸಿದ್ದ ಅಂದಾನಪ್ಪ ಎಂಬುವರಿಗೆ ಸೇರಿದ ಮನೆ, ಕೊಟ್ಟಿಗೆಗೆ ಏಕಾಏಕಿ ನೀರು ನುಗ್ಗಿದ ಪರಿಣಾಮ ೫ ಹಸು, ೬ ಮೇಕೆ ಮೃತಪಟ್ಟಿವೆ. ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ೩೦ ಮೂಟೆ ಹಿಂಡಿ, ಬೂಸ ಕೂಡ ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ಇನ್ನೂ, ಭಾರಿ ಮಳೆಯ ಕಾರಣ ಲಹರಿ ವೇಲು ಅವರ ಆರ್‌ಎಂವಿ ಲೇಔಟ್ ನಲ್ಲಿರುವ ಮನೆಗೂ ನೀರು ನುಗ್ಗಿದ್ದು, ಐದು ಅಡಿಯಷ್ಟು ನೀರು ನಿಂತಿದೆ.
ಭಾರಿ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಆರ್ ಆರ್ ನಗರ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ಭಾರಿ ರಾಧ್ಧಾಂತ ಸೃಷ್ಪಿಸಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದ ,ಮನೆಯಲ್ಲಿದ್ದ ಪಾತ್ರೆ, ಪಗಡೆಗಳು, ಟಿವಿ, ಎಲ್‌ಪಿಜಿ ಸಿಲಿಂಡರ್, ಸೋಫಾ ಸೆಟ್‌ಗಳು ನೀರಿನಲ್ಲಿ ತೇಲಾಡುತ್ತಿರುವ ದೃಶ್ಯ ಕಂಡು ಬಂದಿತು. ಇದರಿಂದಾಗಿ ನಿವಾಸಿಗಳು ರಾತಿಯಿಡಿ ಜಾಗರಣೆ ಅನುಭವಿಸುವಂತಾಯಿತು.
ದೂರವಾಣಿ ಕರೆ ಮಾಡಿದರೂ ಬಿಬಿಎಂಪಿಯವರು ಸ್ಥಳಕ್ಕೆ ಬರದ ಕಾರಣ ಸಂಕಷ್ಟಕ್ಕೆ ಸಿಲುಕಿದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಳಚೆ ನೀರು ನುಗ್ಗಿದ್ದರಿಂದ ಮನೆಯಲ್ಲಿ ಎಲ್ಲಾ ವಸ್ತುಗಳು ನೀರು ಪಾಲಾಗಿವೆ. ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಆರ್ ಆರ್ ನಗರದ ಪ್ರಮೋದ್ ಲೇಔಟ್‌ಗೆ ನೀರು ನುಗ್ಗಿದ್ದ ೧೫ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. ನಾಗರಬಾವಿ ಪ್ರದೇಶದಲ್ಲೂ ಭಾರಿ ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿದು ಬಿದ್ದು, ಕಾರು, ಬೈಕ್‌ಗಳು ಜಖಂಗೊಂಡಿವೆ. ಆರ್ ಆರ್ ನಗರ ಐಡಿಯಲ್ ಹೋಮ್ಸ್ ಬಡಾವಣೆಗೆ ರಾಜಕಾಲುವೆ ಕೊಳಚೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು.
ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಚಿವ ಮುನಿರತ್ನ ವರುಣ ಆರ್ಭಟದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟ ಅಂದಾಜನ್ನು ಪರಿಶೀಲಿಸಿದರು. ರಾಜಕಾಲುವೆಯಿಂದ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದ ನಿವಾಸಿಗಳು ಆಕ್ರೋಶ ಹೊರಹಾಕಿದರು. ತಕ್ಷಣ ಪರಿಹಾರ ನೀಡಲು ಒತ್ತಾಯಿಸಿದರು.
ನಿವಾಸಿಗಳ ಅಹವಾಲನ್ನು ಆಲಿಸಿದ ಮುನಿರತ್ನ ಮಳೆಯಿಂದಾಗಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದು, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮೆಜೆಸ್ಟಿಕ್, ಚಾಮರಾಜಪೇಟೆ, ಹನುಮಂತನಗರ, ಅಶೋಕನಗರ, ಮಲ್ಲೇಶ್ವರ, ರಾಜಾಜಿನಗರ, ಜಯನಗರ, ಬನಶಂಕರಿ, ಜೆಪಿನಗರ, ಮೈಕೋಲೇಔಟ್ ಪ್ರದೇಶಗಳಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಒಳಗಾಗದರು.
ಬಾರಿ ಮಳೆಯಿಂದ ಮಲ್ಲತ್ತಹಳ್ಳಿ ಕೆರೆಯಂತಾಗಿದ್ದು, ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ. ಇದರಿಂದಾಗಿ ಜನರು ಪರದಾಡುವಂತಾಯಿತು. ಕೋರಮಂಗಲದ ೬ನೇ ಬ್ಲಾಕ್‌ನಲ್ಲೂ ಮನೆಗೆ ನೀರು ನುಗ್ಗಿದ್ದು, ರಸ್ತೆಬದಿ ನಿಲ್ಲಿಸಿದ್ದ ಬೈಕ್, ಕಾರುಗಳು ನೀರಿನಲ್ಲಿ ಮುಳುಗಿದ್ದವು. ಸದ್ಯ ರಸ್ತೆಯಲ್ಲಿರುವ ನೀರು ತೆರವು ಮಾಡಲಾಗಿದ್ದು, ನಿವಾಸಿಗಳು ಮನೆಗಳನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕೆ.ಆರ್.ಪುರದ ರಾಮಮೂರ್ತಿ ನಗರ, ಹೊರಮಾವು, ಮಹದೇವಪುರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹೊಯ್ಸಳ ನಗರದಲ್ಲಿ ರಾಜಕಾಲುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಸುಮಾರು ಎರಡು ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದೆ. ಇನ್ನೂ ಪೂರ್ಣಗೊಳ್ಳದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಧಕ್ಕೆ ನಿಂತಿರುವ ರಾಜಕಾಲುವೆ ಕಾಮಗಾರಿಯಿಂದ ಹೊಯ್ಸಳ ನಗರದ ಜನರಿಗೆ ಸಮಸ್ಯೆಯಾಗಿದೆ. ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ವಸ್ತುಗಳು ನೀರುಪಾಲಾಗಿದೆ.
ಮನವಿ: ಮಲ್ಲತ್ತಹಳ್ಳಿ ಪ್ರದೇಶವು ನೀರಿನಿಂದ ಕೆರೆಯಂತಾಗಿದ್ದು, ರಾಜಕಾಲುವೆ ನೀರು ಮನೆಗಳೊಳಗೆ ತುಂಬಿದೆ. ಶಂಕರಮಠ ವಾರ್ಡ್ ಮತ್ತು ಶಕ್ತಿಗಣಪತಿನಗರ ವಾರ್ಡ್‌ನ ಜೆ.ಸಿ.ನಗರ ಮತ್ತು ಕಮಲಾನಗರ ಸುತ್ತಮುತ್ತಲ ಪ್ರದೇಶದ ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ ಮತ್ತು ವಾಹನಗಳು ನೀರಿನಲ್ಲಿ ಮುಳುಗಿವೆ.
ರಾತ್ರಿ ಮನೆ ಹಾನಿಗೊಳಗಾದ ಪ್ರದೇಶಕ್ಕೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಭೇಟಿ ನೀಡಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ, ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂಪರ್ಕ ಕಡಿತ: ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಮಳೆಗೆ ತಗ್ಗು ಪ್ರದೇಶದ ರಸ್ತೆಗಳ ಚಿತ್ರಣವೇ ಬದಲಾಯಿತು. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾದವು. ಕೆಲ ರೈಲ್ವೆ ಕೆಳ ಸೇತುವೆಗಳು ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿದೆ.
ಒಟ್ಟಾರೆ ರಾತ್ರಿಯ ಮಳೆಗೆ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರಿಂದ ಮಳೆ ನೀರು ಹೊರ ಹಾಕಲು ರಾತ್ರಿಯಿಡೀ ಜನರು ಹರಸಾಹಸ ಮಾಡಿರುವ ದೃಶ್ಯ ಸಾಮಾನ್ಯವಾಗಿತ್ತು.

ಮಳೆ ಪ್ರಮಾಣ..!
ಜ್ಞಾನ ಭಾರತಿ-೯೮ ಮೀ ಮೀ., ನಾಗರಬಾವಿ- ೯೧.ಮೀಮಿ., ಹಂಪಿನಗರ-೯೦ ಮಿಮೀ., ನಂದಿನಿ ಲೇಔಟ್-೭೮ ಮಿಮೀ, ಹೆಗ್ಗನಹಳ್ಳಿ-೬೭.೫ ಮಿಮೀ., ಮಾರುತಿ ಮಂದಿರ-೬೪.೫ ಮಿಮೀ., ವಿವಿಪುರಂ-೫೮.೫ ಮಿಮೀ., ರಾಜರಾಜೇಶ್ವರಿ ನಗರ-೫೩.೫ ಮೀಮೀ., ದಯಾನಂದ ನಗರ-೪೮.೫ ಮಿಮೀ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ ೬ ರ ತನಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.