ಮಳೆ ಆತಂಕದ ನಡುವೆ ಭರದಿಂದ ಸಾಗಿದ ತೊಗರಿ ಕಟಾವು

ಕಲಬುರಗಿ: ಜ.8:ತೊಗರಿ ಕಣಜ, ತೊಗರಿ ನಾಡು ಎನ್ನಿಸಿಕೊಂಡ ಜಿಲ್ಲೆಯಲ್ಲಿ ತೊಗರಿಯ ರಾಶಿ ಭರದಿಂದ ಸಾಗಿದೆ. ಜಿಲ್ಲೆಯ ಬಹುತೇಕ ಕಡೆ ತೊಗರಿಯ ಕಟಾವು ನಡೆಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಕೆಲ ರೈತರು ಸಾಂಪ್ರದಾಯಿಕ ಪದ್ದತಿಯಲ್ಲಿ ತೊಗರಿ ರಾಶಿ ನಡೆಸಿದರೆ, ಹೆಚ್ಚಿನ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ.
ದೇಶದ ಮೂಲೆ, ಮೂಲೆಗಳಲ್ಲಿ ಜಿಲ್ಲೆಯ ತೊಗರಿ ಬೇಡಿಕೆಯಿದೆ. ಜಿಲ್ಲೆಯ ಶೇಕಡಾ 70ರಷ್ಟು ಪ್ರದೇಶದಲ್ಲಿ ತೊಗರಿಯ ಬಿತ್ತನೆ ಮಾಡಲಾಗುತ್ತಿದೆ. ಈ ವರ್ಷ ಐದು ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಆದಾಗ್ಯೂ, ಅತಿಯಾದ ಮಳೆ ಹಾಗೂ ಪ್ರವಾಹಕ್ಕೆ ಒಂದಷ್ಟು ಬೆಳೆ ಹಾಳಾಗಿ ಹೋಗಿದೆ. ಅಳಿದುಳಿದ ಬೆಳೆ ಕಟಾವಿನ ಹಂತಕ್ಕೆ ಬಂದಿದ್ದು, ಜಿಲ್ಲೆಯ ಬಹುತೇಕ ಕಡೆ ತೊಗರಿ ಕಟಾವು ಪ್ರಕ್ರಿಯೆ ಭರದಿಂದ ಸಾಗಿದೆ. ತೊಗರಿಯ ಕಟಾವು ಏಕಕಾಲಕ್ಕೆ ನಡೆಯುತ್ತಿರುವುದರಿಂದ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಜೊತೆಗೆ ಕಾರ್ಮಿಕರ ಕೂಲಿ ದರವೂ ಹೆಚ್ಚಾಗಿದೆ. ಹೀಗಾಗಿ ಹೆಚ್ಚಿನ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ.
ಸಾಂಪ್ರದಾಯಿಕ ಪದ್ದತಿಯಲ್ಲಾದರೆ ತಿಂಗಳಾನುಗಂಟಲೇ ತೊಗರಿಯ ಕಣ ಮಾಡಬೇಕಾಗುತ್ತದೆ. ತೊಗರಿ ಹೊಲದಿಂದ ರಾಶಿಯಾಗಿ ಬರುವುದಕ್ಕೆ ದೊಡ್ಡ ಸಾಹಸವನ್ನೇ ಮಾಡಬೇಕಾಗುತ್ತದೆ. ಯಂತ್ರಗಳು ಬಂದ ನಂತರ ರಾಶಿ ಮಾಡುವುದು ಅತ್ಯಂತ ಸರಳ ಹಾಗೂ ಸುಲಭವಾಗಿದೆ. ಆದಾಗ್ಯೂ, ಇದರಿಂದ ಹಲವಾರು ಅಡ್ಡ ಪರಿಣಾಮಗಳಿವೆ. ಒಂದಷ್ಟು ಭಾಗ ತೊಗರಿಯ ಧಾನ್ಯ ಚೆಲ್ಲಾಪಿಲ್ಲಿಯಾಗಿ ಹೊಲದಲ್ಲಿ ಚೆಲ್ಲಿ ಹೋಗುತ್ತಿದೆ. ಜಾನುವಾರುಗಳಿಗೆ ಮೇವು ಸಿಗದಂತಾಗುತ್ತದೆ. ಇದೆಲ್ಲವನ್ನು ಬದಿಗಿಟ್ಟಲ್ಲಿ ಯಂತ್ರಗಳಿಂದ ಅತ್ಯಂತ ಅನುಕೂಲವಾಗಿದೆ ಎಂಬುದು ರೈತರ ಅಭಿಪ್ರಾಯ.
ಏಕಕಾಲಕ್ಕೆ ಹತ್ತಾರು ಎಕರೆ ಕಟಾವು ಮಾಡಬಲ್ಲ ದೊಡ್ಡ ಯಂತ್ರಗಳ ಜೊತೆಗೆ ತೊಗರಿ ರಾಶಿಗೆ ಸಣ್ಣ ಯಂತ್ರಗಳೂ ಬಂದಿವೆ. ತೊಗರಿ ಗಿಡವನ್ನು ಕಟ್ಟಿಗೆಯಿಂದ ಬಡಿದು, ನಂತರ ಸಣ್ಣ ಗಾತ್ರದ ಯಂತ್ರಗಳಿಗೆ ಹಾಕಿ ರಾಶಿ ಮಾಡುವ ಮತ್ತೊಂದು ವಿಧಾನವನ್ನೂ ರೈತರು ಅನುಸರಿಸುತ್ತಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದರೂ ಅತಿಯಾದ ಮಳೆಯಿಂದ ಅರ್ಧದಷ್ಟು ಪ್ರದೇಶ ಹಾನಿಗೆ ತುತ್ತಾಗಿದೆ. ಇದ್ದ ಬೆಳೆಯಲ್ಲಿಯೂ ಸೂಕ್ತ ರೀತಿಯಲ್ಲಿ ಇಳುವರಿ ಬರುತ್ತಿಲ್ಲ. ಇದರಿಂದಾಗಿ ಈ ವರ್ಷ ನಷ್ಟ ಕಟ್ಟಿಟ್ಟ ಬುತ್ತಿ ಎಂದು ರೈತರು ಅಲವತ್ತುಕೊಂಡಿದ್ದಾರೆ.