ಮಳೆ ಅವಾಂತರ ೫ ಸಾವು

ಬೆಂಗಳೂರು,ಆ. ೨- ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣ, ಈಗ ಮತ್ತೆ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸುರಿದ ವರ್ಷಧಾರೆಯಿಂದಾಗಿ ಮನೆಯ ಮೇಲೆ ಗುಡ್ಡ ಕುಸಿದು ಐವರು ಅಸುನೀಗಿದ್ದಾರೆ. ಇದೇ ವೇಳೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ರೈತನೊಬ್ಬ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಘಟನೆ ಸಂಭವಿಸಿದೆ.
ಮೃತರನ್ನು ನಾರಾಯಣ್ ನಾಯಕ್, ಪುತ್ರಿ ಲಕ್ಷ್ಮಿ ನಾರಾಯಣ್‌ನಾಯಕ್, ಮಗ ಅನಂತ್‌ನಾರಾಯಣ್‌ನಾಯಕ್ ಹಾಗೂ ತಂಗಿಯ ಮಗ ಪ್ರವೀಣ್ ರಾಮಕೃಷ್ಣ ನಾಯಕ್ ಎಂದು ಗುರುತಿಸಲಾಗಿದೆ.
ನಿನ್ನೆ ಸುರಿದ ಮಹಾಮಳೆಗೆ ಕುಕ್ಕೆ ಸುಬ್ರಮಣ್ಯ ಬಳಿ ಮನೆಯ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಅಸುನೀಗಿ ದುರಂತ ನಡೆದ ಮರು ದಿನವೇ ಭಟ್ಕಳ್‌ನಲ್ಲಿ ಈ ಘಟನೆ ನಡೆದಿದೆ.
ಮನೆಯ ಮೇಲೆ ಗುಡ್ಡ ಕುಸಿದು ಈ ಅವಘಡ ಸಂಭವಿಸಿದ್ದು, ಜೆಸಿಬಿ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗದ ಕಾರಣ ಸ್ಥಳೀಯರೇ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ರಾಜ್ಯದ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಕೊಂಕಣ ರೈಲ್ವೆ ಒಂದು ರೈಲಿನ ಸಂಚಾರವನ್ನು ರದ್ದುಪಡಿಸಿದ್ದು. ರೈಲ್ವೆ ಸಂಚಾರ ಮೊಟಕುಗೊಂಡಿದೆ. ಮತ್ತೆ ಕೆಲವು ರೈಲುಗಳ ವೇಳಾ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.
ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಮತ್ತು ಭಟ್ಕಳ ನಡುವೆ ರೈಲ್ವೆಹಳಿಗಳು ಸಂಪೂರ್ಣ ಜಲಾವೃತವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ್ ಆದೇಶ ಹೊರಡಿಸಿದ್ದಾರೆ.ಅಂಗನವಾಡಿ, ಪ್ರಾಥಮಿಕ ಪ್ರೌಢಶಾಲೆಗಳಿಗೆ ಇಂದು ಮಾತ್ರ ರಜೆ ನೀಡಲಾಗಿದೆ.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ಜನಜೀವನ ಏರುಪೇರಾಗಿದೆ. ಸತತ ಮಳೆಯಿಂದಾಗಿ ಕಚೇರಿಗಳಿಗೆ ತೆರಳಲು ಸಾಧ್ಯವಾಗದೆ ಪರದಾಡುವಂತಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ರಸ್ತೆ ಹಾಗೂ ಸೇತುವೆ ಕೊಚ್ಚಿ ಹೋಗಿದೆ. ಇದರಿಂದಾಗಿ ಹೊನ್ನಾಳ್ಳಿ ಹಾಗೂ ನ್ಯಾಮತಿ ಸಂಪರ್ಕ ಕಡಿದು ಹೋಗಿದೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾರಿ ಮಳೆಯಿಂದಾಗಿ ಜಿಲ್ಲೆಯ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.ವಿಜಯನಗರ ಜಿಲ್ಲೆಯಲ್ಲೂ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನೆಲಕಚ್ಚಿದೆ. ಹೊಸಪೇಟೆ ತಾಲ್ಲೂಕಿನ ಧರ್ಮಸಾಗರದಲ್ಲಿ ಹತ್ತಿ, ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಹಂಪಿ, ಕಡ್ಡಿರಾಂಪುರದಲ್ಲಿ ಬಾಳೆ ತೋಟಕ್ಕೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಇಂದು ಬೆಳಿಗಿನ ಜಾವ ಧಾರಾಕಾರ ಮಳೆ ಸುರಿದಿದೆ. ಮುನ್ನೆಚ್ಚೆರಿಕೆ ಕ್ರಮವಾಗಿ ಜಿಲ್ಲಾಡಳಿತ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದೆ. ಮಳೆಯಿಂದಾಗಿ ಹಾಲು ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲೂ ವ್ಯತ್ಯಯವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ರಾಮನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅರ್ಕಾವತಿ, ವೃಷಭಾವತಿ ಮತ್ತು ಕಣ್ವಾ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಸುತ್ತಮುತ್ತಲ ಜಮೀನುಗಳು ನಡು ಗಡ್ಡೆಯಾಗಿ ಪರಿಣಮಿಸಿದೆ. ಇನ್ನೊಂದೆಡೆ ಮಂಡ್ಯ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಸಿಡಿಲು ಬಡಿದು ೫೦ ಕುರಿಗಳು ಸಾವನ್ನಪ್ಪಿವೆ.
ಇಂದೂ ಕೂಡ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆ ಬೀಳಲಿದ್ದು, ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇಂದೂ ಕೂಡ ರಾಜ್ಯದ ೨೦ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕುಕ್ಕೆಸುಬ್ರಮಣ್ಯಕ್ಕೆ ಪ್ರವೇಶ ನಿರ್ಬಂಧ
ಇಂದು ನಾಗರಪಂಚಮಿ, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕುಕ್ಕೆಸುಬ್ರಹ್ಮಣ್ಯಕ್ಕೆ ಆಗಮಿಸಿ, ಪೂಜೆ ಸಲ್ಲಿಸುವುದು ಸಹಜ. ಆದರೆ, ಧಾರಾಕಾರ ಮಳೆ ಪೂಜೆಗೆ ಅಡ್ಡಿಯುಂಟು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲ್ಲೂಕಿನ ಹಲವೆಡೆ ವರುಣನ ಆರ್ಭಟಕ್ಕೆ ಭಾರಿ ಭೂಕುಸಿತ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮೇಘಸ್ಫೋಟದಿಂದಾಗಿ ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳು ದ್ವೀಪದಂತಾಗಿದೆ, ನಾಗರಪಂಚಮಿ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರನ್ನು ನಿರೀಕ್ಷಿಸಲಾಗಿದ್ದ ಸುಬ್ರಹ್ಮಣ್ಯ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ನೆರೆ ಹಾವಳಿಯಿಂದ ತತ್ತರಿಸಿದೆ. ೨ ದಿನಗಳ ಕಾಲ ದೇಗುಲಕ್ಕೆ ಬರದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.