ಮಳೆ ಅವಾಂತರ: ಶಾಲಾ ಕಾಂಪೌಂಡ್ ನೆಲಸಮ

ತುರುವೇಕೆರೆ, ಆ. ೫- ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮಲ್ಲೂರು ಗ್ರಾಮದಲ್ಲಿ ಸತತ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿಪರೀತ ಮಳೆಯಿಂದಾಗಿ ಮಲ್ಲೂರು ಗ್ರಾಮದ ಸರ್ಕಾರಿ ಶಾಲಾ ಕಾಂಪೌಂಡ್ ಕುಸಿದು ನೆಲಕ್ಕುರುಳಿದೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ನಿರ್ಮಾಣವಾಗಿದ್ದ ಶಾಲಾ ಕಾಂಪೌಂಡ್ ಮಳೆಯ ರಭಸಕ್ಕೆ ಸಿಲುಕಿ ಕುಸಿದಿರುವುದು ಒಂಡೆದೆಯಾದರೆ ಕೆಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಷ್ಟೇ ಅಲ್ಲದೆ ಗ್ರಾಮದ ಅಮಾನಿಕೆರೆ ಕೋಡಿ ಬಿದ್ದಿದ್ದು, ಕೆರೆಯ ಏರಿ ಬಿರುಕು ಬಿಟ್ಟು ಅಪಾಯದ ಅಂಚಿನಲ್ಲಿದೆ. ಇನ್ನು ಮಳೆಯ ಆರ್ಭಟ ಇದೇ ರೀತಿ ಮುಂದುವರೆದರೆ ಗ್ರಾಮಕ್ಕೆ ಸಂಕಷ್ಟ ಎದುರಾಗುವಂತಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.