ಮಳೆ ಅವಾಂತರಕ್ಕೆ ಇಬ್ಬರು ಬಲಿ

ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ಮರ ಉರುಳಿ ಬಿದ್ದಿರುವುದು.

ಬೆಂಗಳೂರು,ಮೇ.೩೦-ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುನ್ನ ಮಳೆ ಆರಂಭವಾಗಿದ್ದು, ರಾಜ್ಯದ ಹಲವೆಡೆ ಸುರಿದ ಭಾರೀ ಮಳೆಗೆ ವಿಜಯಪುರ, ಶಿವಮೊಗ್ಗ, ಬಳ್ಳಾರಿಯಲ್ಲಿ ಭಾರೀ ಅವಾಂತರ ಸೃಷ್ಟಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕಿರಿಶ್ಯಾಳ ಗ್ರಾಮದ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ದ್ಯಾಮಣ್ಣ ಎಂಬುವರು ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ೨೦ಕ್ಕೂ ಹೆಚ್ಚು ಕುರಿಗಳು ಮೇಕೆಗಳು ಸಾವನ್ನಪ್ಪಿವೆ. ಅತ್ತ ಗಣಿನಾಡು ಬಳ್ಳಾರಿಯ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಯಾಲ್ಪಿ ಕುಂತ್ನಾಳ ಗ್ರಾಮದಲ್ಲಿ ರೈತ ಪಂಪಾಪತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಇತ್ತ ಶಿವಮೊಗ್ಗದಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಯಾಗಿದ್ದು, ಜಿಲ್ಲೆಯ ವಿನೋಬನಗರದ ಆಶ್ರಯ ಬಡಾವಣೆ ನಿವಾಸಿ ಲಕ್ಷ್ಮಿಬಾಯಿ ಕುರಿಗಳಿಗೆ ಮೇವು ತರಲು ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಶಿವಮೊಗ್ಗದ ದುರ್ಗಿಗುಡಿ ಬಡಾವಣೆಯಲ್ಲಿ ಭಾರೀ ಗಾಳಿಗೆ ತೆಂಗಿನ ಮರ ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ಸೋಮಿನಕೊಪ್ಪ ಬಡಾವಣೆಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಅಲ್ಲದೇ ವಿನೋಬನಗರದ ರಾಜಕಾಲುವೆಯಲ್ಲಿ ಸಿಲುಕಿದ್ದ ಎಮ್ಮೆಯನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಭಾರೀ ಮಳೆಗೆ ಜನರು ಕಂಗಾಲಾಗಿದ್ದಾರೆ.
ಹಲವೆಡೆ ಮಳೆ ಈ ನಡುವೆ ಇಂದು ಮುಂಜಾನೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ , ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಾಜಧಾನಿ ಬೆಂಗಳೂರು, ಮೈಸೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ.ಮಳೆಯಿಂದಾಗಿ ಜನರು, ಬೈಕ್ ಸವಾರರು ಪರದಾಡುವಂತಾಗಿದೆ. ಇಂದು ಬೆಳ್ಳಂಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಆರಂಭವಾಗಿದ್ದು, ನಿರಂತರ ಮಳೆಯಿಂದಾಗಿ ಕಚೇರಿ, ಅಂಗಡಿಗಳಿಗೆ ತೆರಳುವವರು ತೊಂದರೆ ಅನುಭವಿಸುವಂತಾಯಿತು.
ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ವರುಣನ ಆರ್ಭಟ ಜೋರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನೂ ೩ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ ೨ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೇ ೩೦ರಿಂದ ಜೂನ್ ೧ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ, ಬೆಂಗಳೂರು ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ, ಬೆಂಗಳೂರು ಗ್ರಾಮಾಂತರ, ತುಮಕೂರು,ಚಿಕ್ಕಬಳ್ಳಾಪುರ,ಚಿಕ್ಕಮಗಳೂರು, ಕೊಡಗು, ಮಂಡ್ಯ, ರಾಮನಗರ, ಮೇ ೩೧ ಮತ್ತು ಜೂನ್ ೧ ರಂದು ಚಾಮರಾಜನಗರ ಜಿಲ್ಲೆಗಳು. ಇಂದಿನಿಂದ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.