ಮಳೆ ಅಬ್ಬರ, ಪ್ರವಾಹ ಭೀತಿ

ಬೆಂಗಳೂರು, ಜು.೨೪-ರಾಜ್ಯದ ಮಲೆನಾಡು, ಕರಾವಳಿ, ಉತ್ತರ ಕನ್ನಡ, ಕರಾವಳಿ ಪ್ರದೇಶ ಸೇರಿದಂತೆ ಹವೆಡೆ ವರುಣನ ಆರ್ಭಟ ಮುಂದುವರಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ನಾಲ್ಕು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ೯ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ರಾಜ್ಯಾದ್ಯಂತ ಮತ್ತೆ ಚುರುಕುಗೊಂಡಿರುವ ಮುಂಗಾರು ಮಳೆ ಮುಂದಿನ ಜುಲೈ ೨೮ರವರೆಗೂ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದುವರಿಯಲಿದೆ. ವಿವಿಧ ಜಿಲ್ಲೆಗಳು ಎಂದಿನಂತೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಒಳಪಟ್ಟಿವೆ. ಮತ್ತೊಂದೆಡೆ ಶಾಲಾ- ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.
ಕರಾವಳಿ ಉಡುಪಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಡಿನ ಬೆಳಗಾವಿ, ಹಾವೇರಿ, ಧಾರವಾಡ, ವಿಜಯಪುರ, ಗದಗ, ಕೊಪ್ಪಳ, ಬೀದರ್, ಕಲಬುರಗಿಯಲ್ಲಿ ಸತತ ಕೆಲವು ದಿನಗಳಿಂದ ಅತ್ಯಧಿಕ ಮಳೆ ದಾಖಲಾಗಿದೆ.ಉಡುಪಿ ಜಿಲ್ಲೆಯ ತಗ್ಗರ್ಸೆ ಗ್ರಾಮದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ರಸ್ತೆ ಕೊಚ್ಚಿ ಹೋಗಿದೆ. ಈ ರಸ್ತೆಯ ಕಾಮಗಾರಿ ಪೂರ್ಣಗೊಂಡು ಒಂದು ವರ್ಷವಾಗಿದೆ. ಆದರೆ ಮಳೆ ಅಬ್ಬರಕ್ಕೆ ರಸ್ತೆ ಕೊಚ್ಚಿ ಹೋಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರ್ಷಧಾರೆ ಮುಂದುವರಿದಿದ್ದು, ಹಲವು ಅನಾಹುತಗಳು ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ೨ ಕಾರುಗಳು ಹೇಮಾವತಿ ನದಿಗೆ ಉರುಳಿ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿ ಬಣಕಲ್ ಸಮೀಪ ೨ ಕಾರುಗಳು ಉರುಳಿ ಬಿದ್ದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ತುಂಗಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿ ದೇವಾಲಯದ ಸುತ್ತಮುತ್ತ ಪ್ರದೇಶಗಳು ಮುಳುಗಡೆಯಾಗಿದೆ. ಗಾಂಧಿ ಮೈದಾನ, ಪ್ಯಾರಲ್ ರಸ್ತೆ ಮೇಲೆ ನದಿ ನೀರು ಉಕ್ಕಿ ಹರಿಯುತ್ತಿದೆ.ವಮೊಗ್ಗ ಜಿಲ್ಲೆಯಲ್ಲೂ ಒಂದು ವಾರದಿಂದ ಮಳೆ ಸುರಿಯುತ್ತಿದ್ದು ತುಂಗಭದ್ರಾ ಹಾಗೂ ಶರಾವತಿ ನದಿ ನೀರಿನ ಹರಿವು ಹೆಚ್ಚಾಗಿದ್ದು, ಜಲಾಶಯ ನೀರಿನ ಮಟ್ಟವು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮುಂಗಾರು ಮಾರುತಗಳು ವಿಳಂಬವಾಗಿ ಆರಂಭವಾದರೂ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿ ಬೆಳೆಗಳು ನಾಶವಾಗಿದೆ.ಕೊಡಗು ಜಿಲ್ಲೆಯಾದ್ಯಂತ ವರುಣ ಅಬ್ಬರ ಮುಂದುವರಿದಿದ್ದು, ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ವೆಂಕಟರಾಜ ರಜೆ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಸುರಿಯುತ್ತಿದೆ. ಇದರಿಂದಾಗಿ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಿರುಸೇತುವೆ ಮುಳುಗಡೆಯಾಗಿದೆ. ಭಾರೀ ಮಳೆಯಿಂದಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನಘಟ್ಟ ೨ನೇ ಭಾರಿಗೆ ಮುಳುಗಡೆಯಾಗಿದೆ.
ಕೇರಳದ ವಯನಾಡು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿವೆ. ಹೆಚ್.ಡಿ. ಕೋಟೆ ತಾಲ್ಲೂಕಿನ ಬಿಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ೮೪ ಅಡಿ ಸಾಮರ್ಥ್ಯ ಹೊಂದಿದ್ದು ಈಗ ಇಂದಿನ ನೀರಿನ ಮಟ್ಟ ೭೮.೩೧ ಅಡಿಯಷ್ಟು ಇದೆ.
ಹಾಸನ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಸಕಲೇಶಪುರ ತಾಲ್ಲೂಕಿನ ಮಾಗೇರಿ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸೋಮವಾರ ಪೇಟೆ-ಮಾಗೇರಿ ರಸ್ತೆ ಸಂಪೂರ್ಣ ಬಂದಾಗಿದ್ದು ರಸ್ತೆ ಸಂಪರ್ಕ ಕಡಿದುಹೋಗಿದೆ.ಜುಲೈ ೨೮ರವರೆಗೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮತ್ತು ಕೆಲವೊಮ್ಮೆ ಅತ್ಯಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಅದರಲ್ಲೂ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಚಿತ್ರದುರ್ಗ, ದಾವಣಗೆರೆ, ಕೋಲಾರ, ಹಾಸನ, ರಾಯಚೂರು, ಹಾವೇರಿ, ಗದಗ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.ಕರಾವಳಿಯ ಸಮುದ್ರ ತೀರದಲ್ಲಿ ಗಾಳಿಯು ಪ್ರತಿ ಗಂಟೆಗೆ ೪೦ ರಿಂದ ೪೫ ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಈ ಸಂಬಂಧ ಮೀನುಗಾರಿಕೆಗೆ ಇಳಿಯದಂತೆ ಮೀನುಗಾರರಿಗೆ ಐಎಂಡಿ ಎಚ್ಚರಿಕೆ ನೀಡಿದೆ.ವಿಜಯಪುರ ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಮೂರು ಮನೆಗಳು ಕುಸಿದು ಬಿದ್ದಿದೆ. ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಅಣೆಕಟ್ಟಿನ ತೀರಾ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಡಂಗುರ ಬಾರಿಸಿ ಸೂಚನೆ ನೀಡಲಾಗಿದೆ.ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ ೫೧೪.೩೦ ಮೀಟರ್ ನೀರಿನ ಸಂಗ್ರಹ ೫೧೯.೬೦ ಮೀಟರ್ (೧೨೩.೦೮೧ ಟಿಎಂಸಿ) ಇದ್ದು, ೧,೧೬,೬೪೮ ಕ್ಯೂಸೆಕ್ ಒಳಹರಿವು ಮತ್ತು ೬,೦೦೦ ಕ್ಯೂಸೆಕ್ ಹೊರಹರಿವು ಇದೆ. ಆಲಮಟ್ಟಿ ಜಲಾಶಯಕ್ಕೆ ಹೆಚ್ಚುವರಿಯಾಗಿ ಮಹಾರಾಷ್ಟ್ರದ ಕೊಯ್ಡಾ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಒಂದು ವಾರದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದ್ಯುತ್ ಉತ್ಪಾದನೆ ಆರಂಭ: ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕದಿಂದ ೬ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದರಿಂದ ಈಗಾಗಲೇ ವಿದ್ಯುತ್ ಉತ್ಪಾದನೆ ಆರಂಭವಾಯಿತು. ಸದ್ಯ ಎರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.೫೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕಕ್ಕೆ ಸಂಜೆ ಚಾಲನೆ ನೀಡಲಾಗಿದ್ದು, ೪೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಕೆಪಿಸಿಎಲ್ ಅಧೀಕ್ಷಕ ಅಭಿಯಂತರ ಚಂದ್ರಶೇಖರ ದೊರೆ ತಿಳಿಸಿದ್ದಾರೆ.ಮನೆ ಕುಸಿತ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಆಲಮೇಲ ತಾಲೂಕಿನ ಗುಂದಗಿ ಗ್ರಾಮದ ಗೌರಾಬಾಯಿ ಬಲಗುಂಪಿ ಹಾಗೂ ಗಬಸಾವಳಗಿಯ ಲಕ್ಷ್ಮೀಬಾಯಿ ಜೇರಟಗಿ ಅವರ ಮನೆಗಳು ಕುಸಿದು ಬಿದ್ದಿವೆ. ಇದರೊಂದಿಗೆ ಬಬಲೇಶ್ವರ ಗ್ರಾಮದಲ್ಲಿ ೧ ಮನೆ ಭಾಗಶಃ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ. ಮುಂದಿನ ಐದು ದಿನಗಳಲ್ಲಿ ಬಸವನಬಾಗೇವಾಡಿ ತಾಲೂಕಿನಲ್ಲಿ ೫೫.೧ ಮೀ, ಇಂಡಿ ೪೯.೨, ಮುದ್ದೇಬಿಹಾಳ ೬೪.೦ ಮೀ, ಸಿಂದಗಿ ೬೫.೭ ಮತ್ತು ವಿಜಯಪುರದಲ್ಲಿ ೩೧.೭ ಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಯಾವ ಜಿಲ್ಲೆಯಲ್ಲಿ ರಜೆ ಘೋಷಣೆ
ಕರಾವಳಿ ರೀತಿ ಮಲೆನಾಡು ಭಾಗದಲ್ಲೂ ಮಳೆ ಅಬ್ಬರವು ಜೋರಾಗಿದೆ. ಹೀಗಾಗಿ ಉತ್ತರ ಕನ್ನಡದಲ್ಲಿ ಭಾರೀ ಮಳೆ ಹಿನ್ನಲೆ ಇಂದು ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕಾರವಾರ, ಕುಮಟ, ಹೊನ್ನಾವರ, ಭಟ್ಕಳ ಮತ್ತು ಯಲ್ಲಾಪುರ ಸೇರಿ ಆಯಾ ತಾಲೂಕು ತಹಶೀಲ್ದಾರರು ರಜೆ ಘೋಷಣೆ ಮಾಡಿದ್ದಾರೆ.