ಮಳೆ ಅಬ್ಬರ, ಜನ ತತ್ತರ, 9 ಸಾವು

ಬೆಂಗಳೂರು,ಜು.೨೪- ರಾಜ್ಯದಲ್ಲಿ ವರುಣನ ಆರ್ಭಟ ತೀವ್ರಗೊಂಡು. ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರ ಬದುಕು ಹೈರಾಣಗೊಂಡಿದೆ. ಭಾರಿ ಮಳೆಯಿಂದ ರಾಜ್ಯದ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ಗ್ರಾಮಗಳು ಜಲಾವೃತಗೊಂಡಿವೆ. ಸೇತುವೆಗಳು ಮುಳುಗಿವೆ, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಬೆಳೆಗಳು ನಾಶಗೊಂಡಿವೆ. ಹೆದ್ದಾರಿಗಳು ಜಲಾವೃತಗೊಂಡು ಬಹುತೇಕ ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ಕಳೆದ ೨೪ ಗಂಟೆಗಳಲ್ಲಿ ೨೧ ಮನೆಗಳು ಕುಸಿದು, ೮೦೪ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಹಲವೆಡೆ ಭೂಕುಸಿತ ಸಂಭವಿಸಿದೆ. ಇದುವರೆಗೂ ೯ ಮಂದಿ ಮಳೆಗೆ ಬಲಿಯಾಗಿದ್ದಾರೆ. ೯ ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ೭ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಮುಂದಿನ ೨೪ ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಯೂ ಇದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಕಳೆದ ಹಲವು ದಿನಗಳಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಬಹುತೇಕ ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದ್ದು, ನದಿಪಾತ್ರದಲ್ಲಿರುವ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿ ಹಲವು ಹಳ್ಳಿಗಳು ದ್ವೀಪದಂತಾಗಿವೆ.
ರಾಜ್ಯದ ಕೃಷ್ಣಾ, ಕಾವೇರಿ, ತುಂಗಭದ್ರಾ, ಹಿರಣ್ಯಕೇಶಿ, ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದ್‌ಗಂಗಾ, ಪಂಚಗಂಗಾ, ಸೇರಿದಂತೆ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿಪಾತ್ರದಲ್ಲಿನ ಹಳ್ಳಿಗಳ ಜನರ ಬದುಕು ಹೈರಾಣಗೊಂಡಿದೆ. ಮನೆ ಹಾಗೂ ಜಾನುವಾರುಗಳ ರಕ್ಷಣೆ ಸಾಧ್ಯವಾಗದೆ ಜನ ತತ್ತರಿಸಿ ಹೋಗಿದ್ದಾರೆ.
೬ ಮಂದಿ ಬಲಿ
ಈ ಭೀಕರ ಜಲ ತಾಂಡವದಿಂದ ಇದುವರೆಗೂ ರಾಜ್ಯದಲ್ಲಿ ೯ ಮಂದಿ ಪ್ರಾಣ ತೆತ್ತಿದ್ದು, ಉತ್ತರ ಕನ್ನಡದಲ್ಲಿ ೪, ಬೆಳಗಾವಿಯಲ್ಲಿ ಇಬ್ಬರು, ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ ತಲಾ ಒಬ್ಬರು ಮಹಾ ಮಳೆಗೆ ಬಲಿಯಾಗಿದ್ದಾರೆ.
ಹಲವೆಡೆ ಮನೆಗಳು ಕುಸಿದಿವೆ, ನೂರಾರು ಮನೆಗಳಿಗೆ ಹಾನಿಯಾಗಿವೆ. ಹೊಲ-ಗದ್ದೆಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾಗಿವೆ. ರಸ್ತೆಗಳು, ಸೇತುವೆಗಳು ಜಲಾವೃತಗೊಂಡು ಸಂಪರ್ಕವೂ ಕಡಿತಗೊಂಡಿವೆ. ಪ್ರಾಣ ಉಳಿಸಿಕೊಳ್ಳಲು ಜನ ಪರದಾಡುತ್ತಿದ್ದಾರೆ. ಹಲವೆಡೆ ಎತ್ತರದ ಸ್ಥಳಗಳಿಗೆ ತೆರಳಿ ಜನ ರಕ್ಷಣೆ ಪಡೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯಂತೂ ಮಳೆಯಿಂದ ತತ್ತರಿಸಿ ಹೋಗಿದ್ದು, ನೆರೆಯ ಮಹಾರಾಷ್ಟ್ರದಲ್ಲೂ ಕುಂಭದ್ರೋಣ ಮಳೆಯಾಗುತ್ತಿರುವುದರಿಂದ ಬೆಳಗಾವಿಯ ನದಿಗಳಿಗೆ ಹೆಚ್ಚಿನ ನೀರು ಬಂದು ಎಲ್ಲ ನದಿಗಳು ಪ್ರವಾಹ ಮಟ್ಟವನ್ನು ಮೀರಿ ಸದಲಗ, ಸಂಕೇಶ್ವರ, ಚಿಕ್ಕೋಡಿ, ನಿಪ್ಪಾಣಿ, ಖಾನಾಪುರ ಪಟ್ಟಣಗಳು ನೀರಿನಿಂದ ಜಲಾವೃತಗೊಂಡಿದ್ದು, ನೂರಾರು ಹಳ್ಳಿಗಳಲ್ಲೂ ನೀರು ನಿಂತು ಮನೆಗಳು ಮುಳುಗಡೆಯಾಗಿವೆ. ಹಲವರನ್ನು ರಕ್ಷಣಾ ತಂಡಗಳು ರಕ್ಷಿಸಿವೆ.
ಬೆಳಗಾವಿಯಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಎನ್‌ಡಿಆರ್‌ಎಫ್ ತಂಡ ಇದುವರೆಗೂ ನೂರಾರು ಜನರ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.ಮಹಾರಾಷ್ಟ್ರ, ಗೋವಾ ರಾಜ್ಯಗಳ ಸಂಪರ್ಕ ಕಡಿತಗೊಂಡಿದೆ. ಹಲವು ಗ್ರಾಮಗಳು ನೀರಿನ ನಡುಗಡ್ಡೆಯಾಗಿದೆ. ನಿಪ್ಪಾಣಿ ತಾಲ್ಲೂಕಿನ ತವನಿದಿ ಘಾಟ್, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ಸಂಕೇಶ್ವರ ಪಟ್ಟಣದ ದೇವಸ್ಥಾನ ಜಲಮಯವಾಗಿದೆ. ಬೆಳಗಾವಿ ನಗರದಲ್ಲೂ ವರುಣನ ಆರ್ಭಟಕ್ಕೆ ಹಲವು ಬಡಾವಣೆಗಳಲ್ಲಿ ನೀರು ತುಂಬಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಖಾನಾಪುರ ಪಟ್ಟಣವೂ ಜಲಾವೃತಗೊಂಡಿವೆ.
ಚಿಕ್ಕೋಡಿ ಹೊರ ವಲಯದ ರಾಮನಗರ ಬಳಿ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿ ಬಾಲಕಿಯೊಬ್ಬಳು ಕೊಚ್ಚಿಕೊಂಡು ಹೋಗಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ಹೋದ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಖ್ಯಾತನಬೀಡು ಗ್ರಾಮದಲ್ಲಿ ಕೊಟ್ಟಿಗೆ ಮನೆ ಕುಸಿದು ಒಬ್ಬರು ಮೃತಪಟ್ಟಿದ್ದಾರೆ. ಪ್ರವಾಹದಿಂದ ನದಿ ದಂಡೆ ಜನರ ಬದುಕು ಬೀದಿಗೆ ಬಂದಿದೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.
ಹೋನ್ನಾವರದಲ್ಲಿ ದೋಣಿ ಮಗುಚಿ ಮೀನು ಹಿಡಿಯಲು ಹೋಗಿದ್ದ ದಂಪತಿಗಳಲ್ಲಿ ಪತ್ನಿ ಮೃತಪಟ್ಟು, ಪತಿ ಈಜಿ ದಡ ಸೇರಿದ್ದಾರೆ. ಮೋಳ್ಕೊಡ ಗ್ರಾಮದ ಮಾದೇವಿ, ಸುಬ್ರಾಯ ಅಂಬಿಗ (೪೬) ಮೃತಪಟ್ಟ ಮಹಿಳೆ.
ಮಳೆಯಿಂದಾಗಿ ರೈಲು ಸಂಚಾರದಲ್ಲೂ ಅಸ್ತವ್ಯಸ್ತವಾಗಿ ಭೂಕುಸಿತದಿಂದ ಕೆಲ ರೈಲುಗಳ ಓಡಾಟವನ್ನು ರದ್ದು ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ, ಕೊಡಗು ಜಿಲ್ಲೆಗಳಲ್ಲೂ ಮಳೆಯಿಂದ ಪ್ರವಾಹ ಪರಿಸ್ಥಿತಿ ರೂಪುಗೊಂಡಿದ್ದು, ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ.

ನಾಳೆ ಸಿಎಂ ಬೆಳಗಾವಿ ಭೇಟಿ
ರಾಜ್ಯದಲ್ಲಿ ಭಾರಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಪ್ರವಾಹಪೀಡಿತ ಬೆಳಗಾವಿ ಜಿಲ್ಲೆಗೆ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡುವರು.
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಾಗಿ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ಖುದ್ದು ಬೆಳಗಾವಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಲಿದ್ದಾರೆ.
ನಿನ್ನೆಯಿಂದ ಪ್ರವಾಹಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪರವರು ಇಂದು ಬೆಳಿಗ್ಗೆ ಸಹ ಬೆಳಗಾವಿ ಜಿಲ್ಲಾಧಿಕಾರಿ ಸೇರಿದಂತೆ ಪ್ರವಾಹಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ ಪರಿಸ್ಥಿತಿಯ ಮಾಹಿತಿ ಪಡೆದು ಪ್ರವಾಹದಿಂದ ತೊಂದರೆಗೊಳಗಾದ ಜನ ಹಾಗೂ ಜಾನುವಾರುಗಳ ರಕ್ಷಣೆಗೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ದಿನದ ೨೪ ಗಂಟೆಯೂ ಎಚ್ಚರವಹಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ೨ ದಿನ ಮಳೆ
ರಾಜ್ಯದಲ್ಲಿ ಇನ್ನೂ ೨-೩ ದಿನ ಮಳೆಯಾಗುವ ಮುನ್ಸೂಚನೆ ಇದ್ದು, ವರುಣನ ಆರ್ಭಟ ಮತ್ತಷ್ಟು ಹೆಚ್ಚಾಗಲಿದ್ದು, ೭ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರವಾಹಪೀಡಿತ ಜಿಲ್ಲೆಗಳಿಗೆ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳನ್ನು ರಕ್ಷಣಾ ಕಾರ್ಯಗಳಿಗೆ ಕಳುಹಿಸಲಾಗಿದೆ. ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಜಿಲ್ಲಾ ಉಸ್ತುವಾರಿ ಸಚಿವರುಗಳು, ಶಾಸಕರುಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮೊಕ್ಕಾಂ ಹೂಡಿ ಪರಿಹಾರ ಕಾರ್ಯಗಳ
ಮೇಲ್ವಿಚಾರಣೆ ನಡೆಸಿದ್ದಾರೆ.