ಮಳೆ ಅಬ್ಬರ-ಜನರ ಪ್ರಾಣ ರಕ್ಷಣೆಗೆ ಆಗ್ರಹ

ಮುಳಬಾಗಿಲು,ಸೆ,೧೦- ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಆರ್ಭಟಕ್ಕೆ ನಾಪತ್ತೆಯಾಗಿರುವ ರಸ್ತೆಗಳನ್ನು ಹುಡುಕಿಕೊಟ್ಟು ಅಭಿವೃದ್ದಿ ಪಡಿಸಿ ಅಮಾಯಕ ಜನ ಸಾಮಾನ್ಯರ ಅಮೂಲ್ಯ ಪ್ರಾಣವನ್ನು ರಕ್ಷಣೆ ಮಾಡುವಂತೆ ರೈತ ಸಂಘದಿಂದ ಲೋಕೋಪಯೋಗಿ ಇಲಾಖೆ ಮುಂದೆ ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ದೇಶದ ಅಭಿವೃದ್ದಿಯಲ್ಲಿ ರಸ್ತೆಗಳ ಪಾತ್ರ ಬಹಳ ಪ್ರಮುಖವಾದುದ್ದು, ಆದರೆ ಶೇಕಡ ೪೦ ರಷ್ಟು ಕಮೀಷನ್ ಹಾವಳಿಯಲ್ಲಿ ಶೇಕಡ ೬೦ ರಷ್ಟು ತಪ್ಪು ಮಾಡದ ಅಮಾಯಕರ ಅಮೂಲ್ಯ ಜೀವ ಕಳೆದುಕೊಳ್ಳುವ ಮಟ್ಟಕ್ಕೆ ಲೋಕೋಪಯೋಗಿ ಇಲಾಖೆ ಹದಗೆಟ್ಟಿ ಗುತ್ತಿಗೆದಾರರಿಗೆ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಲ್ಲಿ ಮಾರ್ಪಟ್ಟಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು.
ಮುಂಗಾರು ಮಳೆ ಪ್ರಾರಂಭವಾದಾಗ ಮಾತ್ರ ರಸ್ತೆಯ ಅವ್ಯವಸ್ಥೆ ಕಳಪೆ ಗುಣಮಟ್ಟ ಅಧಿಕಾರಿಗಳ ಬೇಜವಾಬ್ದಾರಿ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದದ ಅವ್ಯವಸ್ಥೆ ಈಚೆ ಬರುತ್ತದೆ. ಸಮರ್ಪಕವಾದ ರಸ್ತೆ ಮಾಡುವಾಗ ಚರಂಡಿ ಇಲ್ಲದೆ ಬೇಕಾಬಿಟ್ಟಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅವೈಜ್ಞಾನಿಕ ಕಾಮಗಾರಿಯಿಂದ ಸರಾಗವಾಗಿ ಮಳೆ ನೀರಿ ಚರಂಡಿಯಲ್ಲಿ ಹರಿಯುವ ಬದಲು ರಸ್ತೆಯಲ್ಲಿ ಹರಿದು ಮೂರೇ ದಿನಕ್ಕೆ ರಸ್ತೆಯೇ ಮಾಯವಾಗಿ ವಾಹನ ಸವಾರರಿಗೆ ರಸ್ತೆಯೋ ಕೆರೆ ಕುಂಟೆಯೋ ಕಾಣದಾಗಿ ತಾವು ಮಾಡದ ತಪ್ಪಿಗೆ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ಅಧಿಕಾರಿಗಳು ನಿರ್ಮಿಸಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಅಧಿಕಾರಿಗಳು ಹಳೆ ರಸ್ತೆಗಳಿಗೆ ಹೊಸ ರೂಪ ಕೊಟ್ಟು ಕಾಮಗಾರಿ ಮಾಡದೆ ನಕಲಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ಕೋಟ್ಯಾಂತರ ರೂಪಾಯಿ ರಸ್ತೆ ಹಣವನ್ನು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ತಮ್ಮಲ್ಲದ ತಪ್ಪಿಗೆ ಜನ ಸಾಮಾನ್ಯರು ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳಬೇಕಿದೆ. ಅಧಿಕಾರಿಗಳ ಬೇಜವಾಬ್ದಾರಿಗೆ ಅಮಾಯಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ ಎಂದು ಅವ್ಯವಸ್ಥೆ ಬಗ್ಗೆ ಕಿಡಿಕಾಡಿದರು.ಹೋರಾಟದಲ್ಲಿ ವಿಭಾಗೀಯ ಕಾರ್ಯದರ್ಶಿ ಪಾರುಕ್‌ಪಾಷ, ರಾಜ್ಯ ಮುಖಂಡ ಬಂಗಾರಿ ಮಂಜು, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾಲ್ಲೂಕು ಗೌರವಾಧ್ಯಕ್ಷ ವಿಶ್ವ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಮೇಲಾಗಾಣಿ ವಿಜಯ್‌ಪಾಲ್, ರಾಜಶೇಖರ್, ಸುನಿಲ್‌ಕುಮಾರ್, ಸಂತೋಷ್, ಭಾಸ್ಕರ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ರಾಮಮೂರ್ತಿ, ವೇಣು, ಕೇಶವ, ಯುವ ರೈತ ಮುಖಂಡ, ನವೀನ್, ಪುತ್ತೇರಿ ರಾಜು, ಜುಬೇರ್‌ಪಾಷ, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಮುಂತಾದವರು ಇದ್ದರು.