ಮಳೆ ಅಬ್ಬರ: ಗುಂಡಿ ಬಿದ್ದ ರಸ್ತೆಗಳು

ನಗರದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಗೂ ಪುಟ್‌ಪಾತ್‌ಗಳಿಗೆ ಹಾನಿಯಾಗಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಹಾಕಿರುವುದು.

ಬೆಂಗಳೂರು, ಮೇ.೨೦-ರಾಜಧಾನಿಯಲ್ಲಿ ಮತ್ತೆ ರಸ್ತೆ ಗುಂಡಿಗಳ ಕಾರುಬಾರು ಕಾಣತೊಡಗಿದ್ದು ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ.
ಅವುಗಳನ್ನು ಮುಚ್ಚದಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಇವು ಅಮಾಯಕರ ಪಾಲಿಗೆ ಸಾವಿನ ಗುಂಡಿಗಳಾಗುತ್ತಿವೆ ಎಂಬುದು ಸ್ಥಳೀಯರ ಆರೋಪ.
ಪಾಲಿಕೆ ವ್ಯಾಪ್ತಿಯ ೧,೩೪೪ಕಿ.ಮೀ.ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಿದ್ದರೆ, ೧೩,೬೩೮ಕಿ.ಮೀ. ಉದ್ದದ ವಾರ್ಡ್ ರಸ್ತೆಗಳಿವೆ. ಪ್ರತಿ ರಸ್ತೆಯಲ್ಲಿ ಕನಿಷ್ಠ ನಾಲ್ಕೈದು ಗುಂಡಿಗಳ ದರ್ಶನವಾಗುತ್ತದೆ.
ಅಡ್ಡರಸ್ತೆಗಳು, ಗಲ್ಲಿಗಳಲ್ಲಿನ ಇಕ್ಕಟ್ಟಾದ ಹಾದಿಗಳ ಸ್ಥಿತಿ ತುಂಬಾ ಹದಗೆಟ್ಟಿವೆ. ಪೂರ್ವ ಮುಂಗಾರು ಮಳೆಯಿಂದಾಗಿ ಎನ್ ಎಚ್‌ಎಂ ಲೇಔಟ್‌ನ ಮೊದಲ ಕ್ರಾಸ್, ಕಿಲೋರ್ಸ್ಕರ್ ಲೇಔಟ್‌ನ ಮೊದಲ ಮುಖ್ಯ ರಸ್ತೆ, ಗುರುರಾಜ ಲೇಔಟ್‌ನ ೨ನೇ ಮುಖ್ಯರಸ್ತೆ, ಶೆಟ್ಟಿಹಳ್ಳಿಯ ೫ನೇ ಕ್ರಾಸ್, ಅಶೋಕ ನಗರದ ೧೪ನೇ ಕ್ರಾಸ್, ತ್ಯಾಗರಾಜನಗರದ ಗಂಗಮ್ಮ ದೇವಸ್ಥಾನದ ಮುಖ್ಯರಸ್ತೆ, ಬಸವನಗುಡಿಯ ಮಾರುಕಟ್ಟೆ ರಸ್ತೆ, ಐಟಿಐ ಲೇಔಟ್‌ನ ಜೆಪಿಎನ್ ಇನ್ ಸ್ಟಿಟ್ಯೂಟ್ ಮುಂಭಾಗದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ.
ನೈಋತ್ಯ ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಇನ್ನಷ್ಟು ರಸ್ತೆ ಗುಂಡಿಗಳು ಕಾಣಿಸಲಿದೆ. ಇದರಿಂದಾಗಿ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಇನ್ನೊಂದೆಡೆ, ಫಿಕ್ಸ್ ಮೈ ಸ್ಟ್ರೀಟ್ ಆಪ್ನಲ್ಲಿ ನಗರದಾದ್ಯಂತ ಅಪಾಯಕಾರಿ ರಸ್ತೆ ಗುಂಡಿಗಳು ಪತ್ತೆಯಾಗಿವೆ.
ಸಾರ್ವಜನಿಕರು ರಸ್ತೆ ಗುಂಡಿಗಳ ಭಾವಚಿತ್ರ ತೆಗೆದು ಈ ಆ?ಯಪ್‌ನಲ್ಲಿ ಅಪ್‌ಲೋಡ್ ಮಾಡಿ ಪಾಲಿಕೆ ಗಮನಕ್ಕೆ ತರುತ್ತಿದ್ದಾರೆ.ಆದರೆ, ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿಯಂತೂ ಅದೇ ರಾಗ ಅದೇ ಹಾಡು ಎಂಬಂತಾಗಿದೆ.