ಮಳೆ ಅಬ್ಬರ: ಕೋಡಿಬಿದ್ದ ಉಣಕಲ್ ಕೆರೆ


ಹುಬ್ಬಳ್ಳಿ,ಜು.23: ಧಾರವಾಡ ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ಮುಂಗಾರು ಮಳೆಯ ಅಬ್ಬರದಿಂದಾಗಿ ಹುಬ್ಬಳ್ಳಿಯ ಉಣಕಲ್ ನ ಚನ್ನಬಸವಸಾಗರ ಕೆರೆ ಕೋಡಿ ಹರಿಯುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುವಂತಿತ್ತು.

ಗಾಮನಗಟ್ಟಿ, ನವನಗರ ಭಾಗದಲ್ಲಿ ಮಳೆಯಾದರೇ ಉಣಕಲ್ ಕೆರೆ ತುಂಬಿ ಹರಿಯುತ್ತದೆ. ಕೋಡಿ ಬಿದ್ದ ನೀರು ರಾಜಕಾಲುವೆ ಮುಖಾಂತರ ಹರಿದು ಹೋಗಲಿದ್ದು, ಕಾಲುವೆ ಅಂಚಿನ ಪ್ರದೇಶಗಳಲ್ಲಿ ಆತಂಕದ ಕರಿಛಾಯೆ ಆವರಿಸುವಂತಾಗಿದೆ.

ಕಲಘಟಗಿಯ ನೀರಸಾಗರ ಕೆರೆ ಕೂಡಾ ಬಹುತೇಕ ತುಂಬಿದ್ದು, ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಸ್ಥಳೀಯರ ಮೊಗದಲ್ಲಿ ಇದೀಗ ಕೆರೆ ತುಂಬಿದ ಹಿನ್ನಲೆಯಲ್ಲಿ ಸ್ಥಳೀಯರಲ್ಲಿ ಮಂದಹಾಸ ಮೂಡಿದೆ.

ನಿರಂತರ ಜಡಿ ಮಳೆಯಿಂದಾಗಿ ಹುಬ್ಬಳ್ಳಿ-ಧಾರವಾಡ ಜನತೆ ಹೈರಾಣಾಗಿದ್ದು, ಸಾಕೋ ಸಾಕೋ ಮಳೆರಾಯ ಎನ್ನುವಂತಾಗಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಹ ದುಸ್ಥಿತಿಗೆ ಒಳಗಾದರೇ, ಕೆಲ ಗ್ರಾಮೀಣ ಪ್ರದೇಶದಲ್ಲಿ ಹಳ್ಳ ಉಕ್ಕಿ ಹರಿದು ಹೊಲಗಳಲ್ಲಿ ನೀರು ನುಗ್ಗಿದದ ಹಿನ್ನಲೆಯಲ್ಲಿ ಮುಂಗಾರು ಬೆಳೆಗಳು ನಾಶವಾಗುವ ಭೀತಿಗೆ ರೈತರು ಒಳಗಾಗುವಂತಾಗಿದೆ.