ಮಳೆ ಅಬ್ಬರ, ಅಪಾರ ಬೆಳೆ ಹಾನಿ,ಸಂಪರ್ಕ ಕಡಿತ ೧ ಸಾವು

ಬೆಂಗಳೂರು.ಆ.೬-ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಮಲೆನಾಡು ಕರಾವಳಿ ಜಿಲ್ಲೆಗಳೂ ಸೇರಿದಂತೆ ೧೪ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ.
ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು ಹಳದಿ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ವಿಜಯಪುರ, ಕಲಬುರಗಿ, ಯಾದಗಿರಿ, ಹಾವೇರಿ, ಧಾರವಾಡ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕಳದೆ ಕೆಲ ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿ ಹಲವೆಡೆ ಸೇತುವೆಗಳು, ರಸ್ತೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವು ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹೊಲ-ಗದ್ದೆಗಳಲ್ಲೂ ನೀರು ನಿಂತಿದೆ.
ವಿಜಯಪುರದ ಡೋಣಿ ನದಿ ಪ್ರವಾಹದಿಂದ ಜಲಾವೃತವಾದ ದೇವರ ಹಿಪ್ಪರಗಿ ತಾಲ್ಲೂಕಿನ ಸಾತಿಹಾಳ ಗ್ರಾಮದ ಸೇತುವೆ ಈ ಎರಡು ದಿನಗಳಿಂದ ನೀರಿನಲ್ಲಿ ಮುಳುಗಿದ್ದು, ವಾಹನ ಓಡಾಟ ಸಂಪೂರ್ಣ ಬಂದ್ ಆಗಿದೆ. ಆದರೆ, ಇಂದು ಬೆಳಿಗ್ಗೆ ಹತ್ತಾರು ಪ್ರಯಾಣಿಕರಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ನ ಚಾಲಕ ಜಲಾವೃತವಾದ ಸೇತುವೆ ಮೇಲೆ ಬಸ್ ಚಲಾಯಿಸಿದ್ದು, ಒಂದು ಹಂತದಲ್ಲಿ ಬಸ್ ಸೇತುವೆ ಬಿಟ್ಟು ವಾಲಿದೆ. ಹೇಗೋ ಹರಸಾಹಸ ಪಟ್ಟು ಬಸ್‌ನ್ನು ಚಾಲಕ ದಡ ಸೇರಿಸಿದ್ದಾನೆ. ಇದರಿಂದ ಸ್ವಲ್ಪದರಲ್ಲೇ ಆಗಬೇಕಾಗಿದ್ದ ಅನಾಹುತ ತಪ್ಪಿದೆ. ನಿರ್ಲಕ್ಷ್ಯ ತೋರಿದ ಚಾಲಕನನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡರು.
ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಭದ್ರಾ, ನೇತ್ರಾವತಿ, ಕಾವೇರಿ ನದಿ ಸೇರಿದಂತೆ ಎಲ್ಲ ನದಿಗಳ ನೀರಿನ ಮಟ್ಟ ಹೆಚ್ಚಿದೆ.

ಮೈಸೂರಿನ ಕೆಆರ್‌ಎಸ್ ಜಲಾಶಯ ತುಂಬಿದ್ದು, ೧೪ ಗೇಟ್‌ಗಳಿಂದ ೭೭ ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಐತಿಹಾಸಿಕ ಶ್ರೀರಂಗಪಟ್ಟಣದ ಕೆಲವು ಭಾಗಗಳು ಮತ್ತು ದೇವಾಲಯಗಳು ಜಲಾವೃತಗೊಂಡಿವೆ. ಹಾಗೆಯೇ, ಚಾಮರಾಜನಗರದ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳು ತುಂಬಿವೆ. ಹಲವೆಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
ಹೊರನಾಡು, ಕಳಸಾ ಸಂಪರ್ಕದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಮುಂದುವರೆದಿದ್ದು, ಹಾವೇರಿಯ ರಾಣೆಬೆನ್ನೂರು, ರಟ್ಟೀಹಳ್ಳಿ ಸೇರಿ ಹಲವೆಡೆ ಬೆಳೆ ಹಾನಿ. ಮೆಕ್ಕೆಜೋಳ ಬೆಳೆ ಕೆಂಪು ಬಣ್ಣಕ್ಕೆ ತಿರುಗಿ ಕೊಳೆತು ಹಾಳಾಗುತ್ತಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಕೆರೆ ಕಟ್ಟೆ ಒಡೆದಿದೆ.ದಾವಣಗೆರೆ-ಚನ್ನಗಿರಿ ಹೆದ್ದಾರಿಯಲ್ಲಿರುವ ಹದಡಿ ಕೆರೆ ಬಿರುಕು ಬಿಟ್ಟಿದ್ದು ಸಂಪರ್ಕ ಕಡಿತಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿತ ಹಿನ್ನೆಲೆ ಗ್ರಾಮದ ೧೦ ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಗುಡ್ಡದ ಭಾಗದಲ್ಲಿ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜಿಲ್ಲೆಯ ದಿಬ್ಬೂರು ಹಾಗೂ ತುಮಕೂರು ನಗರಕ್ಕೆ ಸಂಪರ್ಕ ಮಾಡುವ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತ್ತಾಗಿದೆ.ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ ಮುಂದುವರೆದಿದ್ದು, ತಾಳಿಕೋಟೆ ಪಟ್ಟಣದ ಹೊರ ಭಾಗದ ಡೋಣಿ ನದಿಯ ಹಳೆಯ ಸೇತುವೆ ಮುಳುಗಡೆಯಾಗಿದೆ. ಹೊಸ ಸೇತುವೆ ಬಿರುಕು ಬಿಟ್ಟು ಬಿಳೋ ಹಂತಕ್ಕೆ ತಲುಪಿದ ಕಾರಣ ಅಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಮನಗೂಳಿ ದೇವಾಪೂರ ರಾಜ್ಯ ಹೆದ್ದಾರಿ ೬೧ ಬಂದ್ ಮಾಡಿದ್ದು, ವಿಜಯಪುರ ತಾಳಿಕೋಟೆ ಸಂಚಾರ ಸ್ಥಗಿತವಾಗಿದೆ.
ಕೊಡಗು ಮಳೆಗೆ ಒಬ್ಬ ಬಲಿ
ಕೊಡಗು ವ್ಯಾಪ್ತಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಭೀಕರ ಭೂ ಕುಸಿತ, ಪ್ರವಾಹಕ್ಕೆ ಜಿಲ್ಲೆ ತತ್ತರಿಸಿ ಹೋಗಿದೆ. ಅಪಾರ ಆಸ್ತಿ ಪಾಸ್ತಿ ನಷ್ಟದ ಜೊತೆಗೆ ಇಲ್ಲಿಯವರೆಗೆ ಕೊಡಗು ಜಿಲ್ಲೆಯಲ್ಲಿ ಮಳೆ ಒಬ್ಬರನ್ನು ಬಲಿ ಪಡೆದಿದೆ.
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ನೇಗಳ್ಳೆಯಲ್ಲಿ ಗೋಡೆ ಕುಸಿದು ವಸಂತಮ್ಮ ಎಂಬುವರು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಆ ಬಳಿಕವೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮತ್ತೊಂದೆಡೆ, ೩೩ ಜಾನುವಾರುಗಳು ಸಾವನ್ನಪ್ಪಿದರೆ, ೨೬೫ ಮನೆಗಳಿಗೆ ಹಾನಿಯಾಗಿದೆ. ೧೭ ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅವರೆಲ್ಲರಿಗೂ ಸದ್ಯ ತಾತ್ಕಾಲಿಕವಾಗಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.
ಜಿಲ್ಲೆಯೊಳಗಿನ ೧೧೭೪.೪೧ ಕಿಲೋ ಮೀಟರ್ ರಸ್ತೆಗೆ ಹಾನಿಯಾಗಿದೆ. ಇದೊಂದೆ ಬರೋಬ್ಬರಿ ೨೬೪ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ೮೩ ಸೇತುವೆಗಳಿಗೆ ಹಾನಿಯಾಗಿದ್ದು, ೨೧ ಕೋಟಿ ನಷ್ಟವಾಗಿದೆ. ಅಲ್ಲದೆ ೨೮ ಪ್ರಾಥಮಿಕ ಆರೋಗ್ಯ ಕೇಂದ್ರ, ೧೫೦ ಶಾಲೆಗಳು ಹಾಗೂ ೩೯ ಅಂಗನವಾಡಿ ಕೇಂದ್ರಗಳಿಗೆ ಮಳೆಯಿಂದ ಹಾನಿಯಾಗಿದೆ.
ಭಾರೀ ಮಳೆಯಿಂದಾಗಿ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿಗೆ ಭಾರೀ ಪ್ರಮಾಣದ ಹಾನಿಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಾಫಿ ಕಾಯಿ ಕೊಳೆತು ಉದುರುತ್ತಿದೆ. ಸದ್ಯದ ಅಂದಾಜಿನ ಪ್ರಕಾರ ಜಿಲ್ಲೆಯ ಶೇಕಡಾ ೨೦ ಕೋಟಿಗೂ ಅಧಿಕ ಪ್ರಮಾಣದ ಕಾಫಿ ನಷ್ಟವಾಗಿದೆ ಎನ್ನಲಾಗಿದೆ.