ಮಳೆಹಾನಿ ಪರಿಹಾರ ಕಾರ್ಯಕ್ಕೆ ೫೦೦ ಕೋಟಿ ಬಿಡುಗಡೆ

ಉಡುಪಿ, ಜು. ೧೩- ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿಯ ಪರಿಹಾರ ಕಾರ್ಯಗಳಿಗೆ ತಕ್ಷಣ ೫೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಿನ್ನೆ ಮತ್ತು ಇಂದು ಮಳೆ ಪೀಡಿತ ಕೊಡಗು, ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿ ಇಂದು ಉಡುಪಿಯಲ್ಲಿ ಮೂರು ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದಲ್ಲಿ ಅತಿವೃಷ್ಠಿಯಿಂದ ಆಗಿರುವ ಹಾನಿಯ ತಾತ್ಕಾಲಿಕ ಪರಿಹಾರಕ್ಕೆ ತಕ್ಷಣ ೫೦೦ ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಘೋಷಿಸಿದರು.
ರಾಜ್ಯದಲ್ಲಿ ಮಳೆಯಿಂದ ೩೨ ಮಂದಿ ಮೃತಪಟ್ಟಿದ್ದಾರೆ. ೫ ಮಂದಿ ನಾಪತ್ತೆಯಾಗಿದ್ದಾರೆ. ೩೪ ಮಂದಿ ಗಾಯಗೊಂಡಿದ್ದಾರೆ. ೩೦೦ ಮಂದಿಯನ್ನು ಮಳೆಯಿಂದ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.
ಮಳೆಯಿಂದ ತೊಂದರೆಗೊಳಗಾಗಿರುವವರಿಗಾಗಿ ೧೪ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.
ಮಳೆಯಿಂದ ೧೦೬೨ ಮನೆಗಳಿಗೆ ಹಾನಿಯಾಗಿದೆ. ಈ ಹಾನಿಯಾಗಿರುವ ಮನೆಗಳಲ್ಲಿ ೫೮ ಮನೆಗಳು ಸಂಪೂರ್ಣವಾಗಿ ಕುಸಿದಿವೆ. ಉಳಿದಂತೆ ಭಾಗಶಃ ಹಾನಿಯಾಗಿದೆ. ಕುಸಿದಿರುವ ಮನೆಗಳಿಗೆ ೫ ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ ಎಂದರು.
ಮಳೆಯಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ೮ ಮಂದಿ ಮೃತಪಟ್ಟಿದ್ದಾರೆ. ಉಡುಪಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದರು.
ಮಳೆಯಿಂದ ಸುಮಾರು ೩೩೦ಕ್ಕೂ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ಸಂಪೂರ್ಣ ನಷ್ಟದ ವರದಿಯನ್ನು ಸಿದ್ದಪಡಿಸಿಕೊಂಡು ಕೇಂದ್ರಕ್ಕೆ ನೆರವಿಗೆ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಅತಿವೃಷ್ಠಿ ಪರಿಹಾರ ಕಾರ್ಯಗಳಿಗೆ ಹಣದ ಕೊರತೆಯಿಲ್ಲ. ಸಾಕಷ್ಟು ಹಣ ಇದೆ. ಈಗ ೫೦೦ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿರುವುದರಿಂದ ಪರಿಹಾರ ಕಾರ್ಯಗಳು ಮತ್ತಷ್ಟು ಚುರುಕಾಗಿ ನಡೆಯಲಿವೆ ಎಂದು ಅವರು ತಿಳಿಸಿದರು.
ಘರ್ಜಿಸುವ ಸಿಂಹ ಬೇಕು
ರಾಷ್ಟ್ರ ಲಾಂಛನ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ರಾಷ್ಟ್ರೀಯ ಲಾಂಛನ ರಚನೆಯಲ್ಲಿ ಯಾವುದೇ ತಪ್ಪಾಗಿಲ್ಲ. ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ ಎಂದರು.
ರಾಷ್ಟ್ರೀಯ ಲಾಂಛನ ವಿವಾದವನ್ನು ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಅವರವರ ದೃಷ್ಠಿಕೋನದಂತೆ ಸಿಂಹಗಳು ಕಾಣುತ್ತಿವೆ. ನಮಗೆ ಘರ್ಜಿಸುವ ಸಶಕ್ತ ರೂಪದ ಸಿಂಹಗಳು ಬೇಕು ಎಂದು ಅವರು ಹೇಳಿದರು.
ನಿದ್ದೆ ಮಾಡುವ ಸಿಂಹವನ್ನು ನಂಬಿರುವ ಪಕ್ಷ ಕಾಂಗ್ರೆಸ್ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿದ್ದಾರೆ. ಅದರಂತೆ ರಾಷ್ಟ್ರ ಲಾಂಛನದ ಸಿಂಹಗಳು ಘರ್ಜಿಸುತ್ತಿವೆ. ರಾಷ್ಟ್ರ ಲಾಂಛನದ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅವರು ತಿಳಿಸಿದರು.