
ಬೆಂಗಳೂರು,ಮೇ.೨೨-ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ರಾತ್ರಿಯವರೆಗೆ ಸುಡುಗು ಸಿಡಿಲು ಅಲಿಕಲ್ಲು ಜೊತೆ ಅಬ್ಬರಿಸಿ ಬೊಬ್ಬಿರಿದ ಮಳೆರಾಯನ ಆರ್ಭಟಕ್ಕೆ ಮೃತಪಟ್ಟವರ ಸಂಖ್ಯೆ ೮ ಕ್ಕೇರಿದೆ.
ಮಳೆಯ ಅರ್ಭಟ- ಗಾಳಿ- ಸಿಡಿಲಿಗೆ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು ಇನ್ನೂ ಎರಡು ದಿನಗಳ ಕಾಲ ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಗರದ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡ ಕಾರಿನಲ್ಲಿದ್ದ ಯುವತಿಯೊಬ್ಬರು ಪ್ರಾಣ ಕಳೆದುಕೊಂಡರೆ, ರಾಜ್ಯಾದ್ಯಂತ ೮ ಮಂದಿ ಬಲಿಯಾಗಿದ್ದಾರೆ.
ಅಪ್ಪಟ ಅಮಾಯಕರು ಜಲಪ್ರಳಯ, ಸಿಡಿಲ ಹೊಡೆತಕ್ಕೆ ಪ್ರಾಣ ಕಳೆದುಕೊಂಡರು. ಆದರೆ, ಬೆಂಗಳೂರಿನಲ್ಲಿ ಒಬ್ಬ ಯುವಕ ಈ ರಣಮಳೆಯ ನಡುವೆ ಹುಚ್ಚಾಟಕ್ಕೆ ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಮಹಾಮಳೆಯ ನಡುವೆ ರಾಜಕಾಲುವೆಯ ಆಳ ನೋಡುವ ಹುಚ್ಚು ಸಾಹಸಕ್ಕೆ ಇಳಿದ ಯುವಕ ಮೃತಪಟ್ಟಿದ್ದಾನೆ.
ಕೆಪಿ ಅಗ್ರಹಾರದ ರಾಜ ಕಾಲುವೆಯಲ್ಲಿ ಈ ಘಟನೆ ನಡೆದಿದ್ದು, ಲೋಕೇಶ್ ಎಂಬ ಯುವಕ ಕೊಚ್ಚಿ ಹೋಗಿದ್ದಾನೆ. ಅಲ್ಲಿದ್ದವರೆಲ್ಲರೂ ನೀರಿಗೆ ಇಳಿಯಬೇಡ ಎಂದು ಪರಿಪರಿಯಾಗಿ ಕೇಳಿಕೊಂಡರೂ ಮೊಂಡು ಹಠ ಮಾಡಿ ಸಾಹಸಕ್ಕೆ ಇಳಿದ ಯುವಕ ತನ್ನ ಮಾತ್ರವಲ್ಲ ಕುಟುಂಬದ ಬದುಕನ್ನೂ ಕತ್ತಲಾಗಿಸಿದ್ದಾನೆ.
ನೋಡ ನೋಡುತ್ತಿದ್ದಂತೆಯೇ ಆತ ಕೊಚ್ಚಿಹೋಗಿದ್ದ. ಆತನ ಮೃತದೇಹ ಇಂದು ಮುಂಜಾನೆ ಬ್ಯಾಟರಾಯನಪುರದ ಬಳಿ ರಾಜಕಾಲುವೆಯಲ್ಲಿ ಪತ್ತೆಯಾಗಿದೆ. ಇದೀಗ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಆತ ಕೊಚ್ಚಿಹೋಗಿದ್ದಾನೆ ಎಂಬ ಇನ್ನೊಂದು ವಾದವೂ ಕೇಳಿಬರುತ್ತಿದೆ. ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಗ್ರಾಪ ಸದಸ್ಯ ಸಾವು:
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ. ಅಪ್ಪೇನಹಳ್ಳಿಯ ಗ್ರಾ.ಪಂ ಸದಸ್ಯ, ಡಿ. ಸಿದ್ದಾಪುರ ನಿವಾಸಿ ಮಲ್ಲಿಕಾರ್ಜುನ (೩೮) ಮೃತಪಟ್ಟ ಗ್ರಾ.ಪಂ ಸದಸ್ಯ. ಮಲ್ಲಿಕಾರ್ಜುನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಹೊಲದಲ್ಲಿದ್ದ ಗ್ರಾ.ಪಂ ಸದಸ್ಯ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂತಿ ತುಳಿದು ಸಾವು:
ವಿದ್ಯುತ್ ತಂತಿ ತುಳಿದು ಯುವಕನೊಬ್ಬ ಸಾವಿಗೀಡಾದ ಘಟನೆ ಪಿರಿಯಾಪಟ್ಟಣ ತಾಲೂಕು ಬಾರಸೆ ಗ್ರಾಮದಲ್ಲಿ ನಡೆದಿದೆ. ಇಬ್ಬರಿಗೆ ಗಾಯಗಳಾಗಿವೆ. ಸ್ವಾಮಿ (೧೮) ಮೃತ ಯುವಕ. ಹರೀಶ್ ಹಾಗೂ ಸಂಜಯ್‌ಗೆ ಗಾಯವಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಡುವಲಹಟ್ಟಿ ಗ್ರಾಮದ ಕೃಷ್ಣಪ್ಪ ಎಂಬವರಿಗೆ ಸೇರಿದ ಒಂದು ಎತ್ತು ಮತ್ತು ಅಕಳು ಸಿಡಿಲು ಬಡಿದು ಮೃತಪಟ್ಟಿವೆ.
ರಾತ್ರಿ ಸುರಿದ ಗಾಳಿ ಮಳೆಗೆ ಟಾಟಾ ಏಸ್ ಮೇಲೆ ಮರ ಬಿದ್ದಿದ್ದು, ವಾಹನ ಜಖಂಗೊಂಡಿದೆ. ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ೧ನೇ ವಾರ್ಡ್‌ನಲ್ಲಿ ಘಟನೆ ನಡೆದಿದ್ದು, ಪರಶುರಾಮ ಪೊಳದ ಎಂಬವರಿಗೆ ಸೇರಿದ ಟಾಟಾಏಸ್ ವಾಹನವಾಗಿದೆ. ಮರ ಬಿದ್ದ ಪರಿಣಾಮ ಮನೆಯೊಂದರ ಮೇಲ್ಛಾವಣಿಗೆ ಧಕ್ಕೆಯಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಬಾಳೆ ತೋಟಕ್ಕೆ ಹಾನಿ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರಲ್ಲಿ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಬಾಳೆ ತೋಟ ನೆಲಸಮವಾಗಿದೆ. ಗಾಳೆ ಮಳೆಗೆ ಬೃಹತ್ ಮರಗಳು ನೆಲಕ್ಕುರುಳಿವೆ. ಸಿದ್ಧಿ ವಿನಾಯಕ ವೃತ್ತದಲ್ಲಿ ತೆಂಗಿನ ಮರನೆಲಕ್ಕುರುಳಿದೆ.
ನಗರದ ಆಜಂ ಮಸೀದಿ ಎದುರಿಗೆ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮರದ ಕೊಂಬೆಗಳು ಬಿದ್ದು ವಿದ್ಯುತ್ ತಂತಿಗಳು ತುಂಡರಿಸಿವೆ. ನಗರದ ಹಲವೆಡೆ ವಿದ್ಯುತ್ ಸಂಚಾರ ಅಸ್ತವ್ಯಸ್ತವಾಗಿದೆ. ಗಾಳಿಯ ರಭಸಕ್ಕೆ ಶೆಡ್ಡುಗಳ ಮೇಲ್ಛಾವಣಿಗಳು ನೆಲಕಚ್ಚಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಭಾರೀ ಮಳೆ ಎಚ್ಚರಿಕೆ:
ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಕೆ ಎಸ್ ಎನ್ ಡಿ ಎಂ ಸಿಯು, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯಾಧ್ಯಂತ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದು ತಿಳಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ರಾಯಚೂರು, ಯಾದಗಿರಿ, ಬೆಳಗಾವಿ, ಧಾರವಾಡ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವುದಾಗಿ ಮುನ್ಸೂಚನೆ ನೀಡಿದೆ.
ಮಿಂಚು ಸಹಿತ ಸಾಧಾರಣ ಮಳೆ ಹಾಗೂ ಗಾಳಿಯ ವೇಗ ಗಂಟೆಗೆ ೩೦-೪೦ ಕಿಮೀ ತಲುಪುವ ಸಾಧ್ಯತೆಯಿದೆ.