ಮಳೆಯ ರೌದ್ರನರ್ತನ: 7 ಗ್ರಾಮಗಳು ಜಲಾವೃತ

ಮಧುಗಿರಿ, ಆ. ೪- ಸುಮಾರು ೪೦ ವರ್ಷಗಳ ನಂತರ ಜಯಮಂಗಲಿ ನದಿಯ ರೌದ್ರನರ್ತನಕ್ಕೆ ಜನತೆ ಬೆಚ್ಚಿ ಬಿದ್ದಿದ್ದು, ತಾಲ್ಲೂಕಿನ ಚನ್ನಸಾಗರ, ಇಮ್ಮಡಗೊಂಡನಹಳ್ಳಿ, ಕೋಡಗದಾಲ, ನಂಜಾಪುರ, ಸೂರನಾಗೇನಹಳ್ಳಿ, ತಿಗಳರಹಳ್ಳಿ, ವೀರಾಪುರ ಸೇರಿದಂತೆ ೭ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬೆಳಗಿನ ಜಾವ ಸುಮಾರು ೩ ಗಂಟೆಯ ವೇಳೆಗೆ ಈ ಗ್ರಾಮದಲ್ಲಿ ಜಯಮಂಗಲಿ ನದಿ ನೀರಿನ ಹರಿವು ಹೆಚ್ಚಾಗಿ ಏಕಾಏಕಿ ಮನೆಗಳಿಗೆ ನುಗ್ಗಿದ್ದರಿಂದ ಹೆದರಿದ ಗ್ರಾಮಸ್ಥರು ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.
ಕೊರಟಗೆರೆ ತಾಲ್ಲೂಕಿನ ತೀತಾ ಜಲಾಶಯ ತುಂಬಿದ ನಂತರ ಜಯಮಂಗಲಿ ನೀರು ಈ ಭಾಗದಲ್ಲಿ ವ್ಯಾಪಕವಾಗಿ ಹರಿದು ಬರುತ್ತಿದ್ದು, ಚನ್ನಸಾಗರದ ಬಳಿ ಸೇತುವೆಯನ್ನು ಮೀರಿ ಹರಿಯುತ್ತಿದೆ.
ಜಯಮಂಗಲಿ ನದಿ ಪಾತ್ರದಲ್ಲಿರುವ ಬಹುತೇಕ ಗ್ರಾಮಗಳು ಅಪಾಯದ ಅಂಚಿನಲ್ಲಿದ್ದು, ಈ ಗ್ರಾಮಗಳು ಮಳೆ ನೀರಿನಿಂದ ಜಲಾವೃತವಾಗಿದ್ದು, ಜನರು ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳು ಜಲಾವೃತವಾಗಿರುವ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಬೆಳ್ಳಬೆಳಗ್ಗೆ ಗ್ರಾಮಗಳಿಗೆ ತೆರಳಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ನೀರು ಸರಾಗವಾಗಿ ಹರಿಯುವಂತೆ ಜೆಸಿಬಿಗಳ ಮೂಲಕ ತೆರವುಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ಕೊರಟಗೆರೆ ತಾಲ್ಲೂಕಿನ ತೀತಾ ಜಲಾಶಯ ತುಂಬಿದ ನಂತರ ಜಯಮಂಗಲಿ ನೀರು ವ್ಯಾಪಕವಾಗಿ ಹರಿದು ಬರುತ್ತಿದ್ದು, ಜಯಮಂಗಲಿ ನದಿಯ ನೀರು ಚನ್ನಸಾಗರ ಗ್ರಾಮದಲ್ಲಿ ಸೇತುವೆಯನ್ನು ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಬಹುತೇಕ ಗ್ರಾಮಗಳು ಮಳೆ ನೀರಿನಿಂದ ಜಲಾವೃತವಾಗಿದ್ದು, ನದಿ ನೀರು ಗ್ರಾಮಗಳಿಗೆ ನುಗ್ಗಿ ಜನರು ಮನೆಗಳಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳು ಜಲಾವೃತವಾಗಿರುವ ಬಗ್ಗೆ ಮಾಹಿತಿ ತಿಳಿದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಸುರೇಶಾಚಾರ್ ಮತ್ತು ಅಧಿಕಾರಿಗಳ ತಂಡ ಬೆಳ್ಳಬೆಳಗ್ಗೆ ಗ್ರಾಮಗಳಿಗೆ ತೆರಳಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ನೀರು ಸರಾಗವಾಗಿ ಹರಿಯುವಂತೆ ಜೆಸಿಬಿಗಳ ಮೂಲಕ ತೆರವುಗೊಳಿಸುತ್ತಿದ್ದಾರೆ.
ಸ್ಥಳದಲ್ಲೆ ಮೊಕ್ಕಾಂ ಹೂಡಿರುವ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೊಳ, ತಹಶೀಲ್ದಾರ್ ಸುರೇಶಾಚಾರ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲಾಡಳಿತ ರೆಡ್, ಹೈ ಅಲರ್ಟ್ ಘೋಷಿಸಿದೆ.
ಎತ್ತರದ ಪ್ರದೇಶದಲ್ಲಿ ಆಶ್ರಯ
ಏಕಾಏಕಿ ರೌದ್ರ ನರ್ತನ ತೋರಿದ ಜಯಮಂಗಲಿ ನದಿಯ ನೀರು ಗ್ರಾಮದೊಳಗೆ ಹರಿದು ಗ್ರಾಮವು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಹೆದರಿದ ಗ್ರಾಮಸ್ಥರು ಎತ್ತರದ ಪ್ರದೇಶದಲ್ಲಿ ಆಶ್ರಯ ಪಡೆದಿದ್ದು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಕಾಳಜಿ ಕೇಂದ್ರ
ಚನ್ನಸಾಗರ ಗ್ರಾಮದಲ್ಲಿ ಸುಮಾರು ೬೭ ಮನೆಗಳಿದ್ದು, ಬಹುತೇಕ ಎಲ್ಲಾ ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಗ್ರಾಮದಲ್ಲಿದ್ದ ೩೦೦ ಕ್ಕೂ ಹೆಚ್ಚು ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆದು ಗ್ರಾಮಸ್ಥರಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕೊಡಿಗೇನಹಳ್ಳಿಯಲ್ಲೂ ಕಾಳಜಿ ಕೇಂದ್ರ ತೆರೆಯುವ ಚಿಂತನೆಯಿದೆ ಎಂದು ತಹಶೀಲ್ದಾರ್ ಸುರೇಶಾಚಾರ್ ತಿಳಿಸಿದ್ದಾರೆ.
ಜಲಾವೃತಗೊಂಡ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ ಚನ್ನಸಾಗರ, ಇಮ್ಮಡಗಾನಹಳ್ಳಿ, ಕೋಡಗದಾಲ ಇನ್ನು ಮುಂತಾದ ಹಳ್ಳಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ಗ್ರಾಮಗಳಲ್ಲಿ ರೆಡ್ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಯಮಂಗಲಿ ನದಿ ಹರಿಯುವ ಭಾಗಗಳಲ್ಲಿ ಪೋಲೀಸರನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರು ತಮ್ಮ ಮಕ್ಕಳೊಂದಿಗೆ ಕೆರೆಕಟ್ಟೆ, ಹಳ್ಳಗಳ ಬಳಿ ಹೋಗಬಾರದು, ಹಿರಿಯ ನಾಗರೀಕರು, ಮಕ್ಕಳು ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದರು.
ಕೆರೆ ಕಟ್ಟೆಗಳ ಸಮೀಪ ಹೋದದ್ದು ಕಂಡುಬಂದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಜನ-ಜಾನುವಾರುಗಳಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆ ನೀರಿನಿಂದ ಬಾಧಿತರಾದವರಿಗೆ ಆಹಾರ ವ್ಯವಸ್ಥೆಗಾಗಿ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಕಾಳಜಿ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಬಾರದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಮಾತ್ರ ನದಿ ಪಾತ್ರದಲ್ಲಿರುವ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದೇವೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಎಲ್ಲರೂ ಸೇರಿ ಗ್ರಾಮಸ್ಥರ ರಕ್ಷಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
೨೫ ಕೆರೆಗಳು ಭರ್ತಿ
ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸುಮಾರು ೨೫ ಕೆರೆಗಳು ಕೋಡಿ ಹರಿದಿದ್ದು, ಬಿಜವರ, ಕುಣಿಗಲ್ -ತಿಮ್ಮನಹಳ್ಳಿ ಕೆರೆ (ಕೆಟಿ ಹಳ್ಳಿ ಕೆರೆ), ಕಾರ್ಪೆನಹಳ್ಳಿ, ಬಸವನಹಳ್ಳಿ, ಸಿಂಗ್ರಾವುತನಹಳ್ಳಿ, ರಂಗನಪಾಳ್ಯ, ಗುರಮ್ಮನಕಟ್ಟೆ, ದಬ್ಬೆಘಟ್ಟ, ,ಸಿದ್ದಾಪುರ, ಗರಣಿ, ಚೋಳೇನಹಳ್ಳಿ, ಬಿಟ್ಟನಕುರಿಕೆ, ವಜ್ರದಹಳ್ಳಿ ,ಬೆಲ್ಲದಮಡುಗು, ಕೂನಹಳ್ಳಿ, ಭೀಮನಕುಂಟೆ, ಬಿದರಕೆರೆ , ಹೊಸಕೆರೆ ಕೆರೆಗಳು ಸಂಪೂರ್ಣ ತುಂಬಿದ್ದು, ನೀರಕಲ್ಲು ಗ್ರಾಮವೂ ಜಲ ದಿಗ್ಬಂದನಕ್ಕೊಳಗಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಹರಸಾಹಸ ಪಡುತ್ತಿರುವ ಅಧಿಕಾರಿಗಳು
ಜಲಾವೃತಗೊಂಡ ಎಲ್ಲಾ ಗ್ರಾಮಗಳಲ್ಲೂ ರಕ್ಷಣಾ ಕಾರ್ಯ ಕೈಗೊಂಡು ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾದರೂ ಇಮ್ಮಡಗೊಂಡನಹಳ್ಳಿ ಗೆ ತೆರಳಲು ಮಾತ್ರ ಸಾದ್ಯವಾಗದೇ ಹರ ಸಾಹಸ ಪಡುವಂತಾಗಿದೆ. ಸಂಪೂರ್ಣ ಗ್ರಾಮವು ಜಲಾವೃತಗೊಂಡಿದ್ದು, ಗ್ರಾಮಕ್ಕೆ ತೆರಳಲು ಸಂಜೆ ೪ ಗಂಟೆಯವರೆಗೂ ಸಾದ್ಯವಾಗದೇ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಸಿಇಓ ವಿದ್ಯಾಕುಮಾರಿ, ಮಧುಗಿರಿ ಉಪವಿಭಾಗದ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ತಾ.ಪಂ. ಇಓ ಲಕ್ಷ್ಮಣ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.