ಮಳೆಯ ರಭಸಕ್ಕೆ ಕಾರಂಜಾ ನದಿಯ ನೀರಿನಲ್ಲಿ ಇಬ್ಬರ ಸಾವು

ಭಾಲ್ಕಿ:ಜೂ.13: ರವಿವಾರ ಸುರಿದ ಭಾರಿ ಮಳೆಯಿಂದ ಕಾರಂಜಾ ನದಿಯಲ್ಲಿ ಇಬ್ಬರು ಪುರಷರು ಮೃತ ಪಟ್ಟ ಘಟನೆ ಕುಂಟೆಸಿರಸಿ-ಮರೂರ ಗ್ರಾಮಗಳ ಮಧ್ಯದಲ್ಲಿ ನಡೆದಿದೆ.

ತಾಲೂಕಿನ ಜೋಳದಪಕಾ ಗ್ರಾಮಕ್ಕೆ ಅಂತ್ಯ ಸಂಸ್ಕಾರಕ್ಕಾಗಿ ತೆರಳಿದ ಹುಮನಾಬಾದ ತಾಲೂಕಿನ ಜಲಸಿಂಗಿ ಗ್ರಾಮದ ಭೋವಿ ಸಮಾಜದ ತುಕಾರಾಮ ಲಕ್ಷ್ಮಣ ವಾಡೆಕರ್ (33) ಮತ್ತು ಘಾಟಬೋರಾಳ ಗರಾಮದ ತಿಪ್ಪಣ್ಣಾ ವಿಶ್ವನಾಥ ದೊತರೆ (40) ಮೃತ ವ್ಯಕ್ತಿಗಳು.

ಮೃತ ತುಕಾರಾಮ ವಾಡೆಕರ್ ಮತ್ತು ತಿಪ್ಪಣ್ಣಾ ದೊತರೆಯವರು ಜೋದಪಕಾ ಗ್ರಾಮದಲ್ಲಿ ರವಿವಾರ, ಸಂಬಂದಿಗಳ ಅಂತ್ಯ ಸಂಸ್ಕಾರ ನೆರವೇರಿಸಿ ಹಿಂದಿರುಗಿ ತಮ್ಮ ಸ್ವ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ, ಸತತವಾಗಿ ಸುರಿದ ಮಳೆಯಿಂದ ಕಾರಂಜಾ ನದಿಗೆ ರಭಸದಿಂದ ಹರಿದು ಬಂದ ನೀರಿಗೆ ಕೊಚ್ಚಿ ಹೋಗಿದ್ದಾರೆ. ಕುಂಟೆಸಿರಸಿ-ಮರೂರ ಮಧ್ಯದಲ್ಲಿ ನದಿಗೆ ಅಡ್ಡಲಾಗಿ ಕಟ್ಟಿರುವ ಸಣ್ಣ ಸೇತುವೆ ಮೂಲಕ ದ್ವಿಚಕ್ರ ವಾಹನದಲ್ಲಿ ನದಿ ದಾಟುವಾಗ ಈ ಘಟನೆ ಸಂಭವಿಸಿದೆ.

ಸೋಮವಾರ ಬೆಳಿಗ್ಗೆಯಿಂದ ಪೊಲೀಸ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ಹುಡುಕಿ ಮೃತದೇಹ ಮತ್ತು ದ್ವಿಚಕ್ರ ವಾಹನ ಹೊರಗೆ ತೆಗೆದಿದ್ದಾರೆ. ಉಪ ತಹಸೀಲ್ದಾರ ಗೋಪಾಲ ಹಿಪ್ಪರಗಿ ಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.