ಮಳೆಯ ನಡುವೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ

ಮೈಸೂರು,ಆ.4:- ಮಳೆಯ ನಡುವೆಯೇ ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೆ ಜಿಲ್ಲಾದ್ಯಂತ ಸಿದ್ಧತೆ ನಡೆದಿದೆ. ಎಲ್ಲೆಡೆ ಸಂಭ್ರಮ, ಸಡಗರದ ವಾತಾವರಣವಿದೆ. ಖರೀದಿ ಭರಾಟೆಯೂ ಜೋರಾಗಿದೆ. ಹಬ್ಬದ ನೆಪದಲ್ಲಿ ಹಣ್ಣು, ಹೂವು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಮೈಸೂರು ನಗರದ ದೇವರಾಜ ಮಾರ್ಕೆಟ್ ಹಾಗೂ ಹಲವು ಬಡಾವಣೆಗಳಲ್ಲಿ ಹೂ-ಹಣ್ಣುಗಳ ವ್ಯಾಪಾರ ವಹಿವಾಟುಗಳು ಜೋರಾಗಿಯೇ ನಡೆದಿದೆ. ಮೂರ್ನಾಲ್ಕು ದಿನಗಳಿಂದಲೂ ಹಬ್ಬದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದ ಜನರು ಗುರುವಾರ ಅಕ್ಷರಶ ಕಾರ್ಯಭಾರದ ಒತ್ತಡದಲ್ಲಿದ್ದರು. ಬಹುತೇಕ ಮಂದಿ ಶುಕ್ರವಾರ ಮುಂಜಾನೆಯೇ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಮುನ್ನಾ ದಿನವೇ ಅಂತಿಮ ಸಿದ್ಧತೆಯಲ್ಲಿದ್ದರು.
ಇದಕ್ಕೆ ಪೂರಕವಾಗಿ ಹೂವು, ಹಣ್ಣುಗಳು, ಬಾಳೆ ಕಂದು, ಮಾವಿನ ಸೊಪ್ಪು ಖರೀದಿ ಭರಾಟೆಯೂ ಜೋರಾಗಿತ್ತು. ಪೂಜಿಸುವವವರಿಗೆ ವರಮಹಾಲಕ್ಷ್ಮಿ ಒಲಿಯುತ್ತಾಳೋ ಇಲ್ಲವೋ ಗೊತ್ತಿಲ್ಲ. ಆದರೆ, ಹಣ್ಣು, ಹೂವು ಹಾಗೂ ಇತರ ವಸ್ತುಗಳ ಮಾರಾಟಗಾರರಿಗಂತೂ ಗುರುವಾರ `ಲಕ್ಷ್ಮಿ’ ವರ ನೀಡಿದ್ದಳು. ಹಬ್ಬದ ನೆಪದಲ್ಲಿ ದುಪ್ಪಟ್ಟು ಬೆಲೆಗೆ ಹಣ್ಣು, ಹೂವು, ಬಾಳೆ ಕಂದು, ಮಾವಿನ ಸೊಪ್ಪು ಮಾರಾಟ ಮಾಡಲಾಗುತ್ತಿತ್ತು. ಇದಕ್ಕಾಗಿ ಬುಧವಾರವೇ ನಗರಕ್ಕೆ ಮಾವಿನಸೊಪ್ಪು, ಬಾಳೆ ಕಂದುಗಳನ್ನು, ಹೂ-ಹಣ್ಣುಗಳನ್ನು ತಂದು ಪ್ರಮುಖ ವೃತ್ತಗಳು ಹಾಗೂ ರಸ್ತೆ ಬದಿಯಲ್ಲಿಟ್ಟು ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿದ್ದರು. ಇಂದು ಮಳೆ ಬಿಟ್ಟು ಬಿಟ್ಟು ಭಾರೀ ಪ್ರಮಾಣದಲ್ಲಿ ಸುರಿದ ಕಾರಣ ಗ್ರಾಹಕರು ಮತ್ತು ವ್ಯಾಪಾರಸ್ಥರು ಪರದಾಡುವಂತಾಯಿತು.