ಮಳೆಯ ತೀವ್ರತೆಗೆ ಜಿಲ್ಲೆಯ ಅನೇಕಕಡೆ ಮನೆಗೆ ನೀರು – ಬೆಳೆ ನಷ್ಟ

ರಾಯಚೂರು.ಆ.೦೫- ನಿನ್ನೆ ಸಂಜೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು ೩ ಘಂಟೆಗಳಿಗೂ ಅಧಿಕ ಕಾಲ ಸುರಿದ ಭಾರೀ ಮಳೆಯಿಂದಾಗಿ ನಗರ ಸೇರಿದಂತೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ತಗ್ಗು ಭಾಗದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ ಘಟನೆ ನಡೆಯಿತು.
ಸಂಜೆ ೫.೩೦ ರಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅತ್ಯಂತ ತೀವ್ರವಾಗಿತ್ತು. ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ೨ ರಿಂದ ೩ ಅಡಿ ವರೆಗೂ ನೀರು ಹರಿಯುವಂತಾಯಿತು. ತಾಲೂಕಿನ ಜಾಲಿಬೆಂಚಿ ಮತ್ತು ದೇವದುರ್ಗ ತಾಲೂಕಿನಲ್ಲಿ ಮನೆಗೆ ನೀರು ನುಗ್ಗಿ ನಿವಾಸಿಗಳು ತೀವ್ರ ತೊಂದರೆಗೆ ಗುರಿಯಾಗಬೇಕಾಯಿತು. ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ತೀವ್ರವಾಗಿದೆ. ಹಳ್ಳದಲ್ಲಿ ಒಬ್ಬ ರೈತ ಕೊಚ್ಚಿ ಹೋದ ಘಟನೆಯೂ ನಡೆದಿದೆ. ಭಾರೀ ಪ್ರಮಾಣದ ಮಳೆಯಿಂದಾಗಿ ಹಳ್ಳಕೊಳ್ಳದ ಪಕ್ಕದಲ್ಲಿರುವ ಜಮೀನಿನ ಬೆಳೆ ಕೊಚ್ಚಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂದಿನ ಎರಡು ದಿನಗಳ ಕಾಲ ಮಳೆ ನಿರೀಕ್ಷಿಸಲಾಗುತ್ತಿದ್ದು, ರೈತರು ಸೇರಿದಂತೆ ಜನ ಸಾಮಾನ್ಯರು ಆತಂಕಕ್ಕೆ ಗುರಿಯಾಗಿದ್ದಾರೆ. ನಿನ್ನೆ ಸುರಿದ ಮಳೆಯಿಂದ ರೈತರಿಗೆ ಮತ್ತಷ್ಟು ಬೆಳೆ ನಷ್ಟಕ್ಕೆ ದಾರಿ ಮಾಡಿದಂತಾಗಿದೆ. ಭಾರೀ ಪ್ರಮಾಣದ ಮಳೆ ತುಂಗಭದ್ರಾ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಲು ಕಾರಣವಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳಂತೂ ಜೌಗ ಪ್ರದೇಶಗಳಾಗಿ ಮಾರ್ಪಟ್ಟಿವೆ. ವಾಹನ ಸಂಚಾರ ಇದರಿಂದ ಅಸ್ತವ್ಯಸ್ತಗೊಳ್ಳುವಂತಾಗಿದೆ. ಒಟ್ಟಾರೆಯಾಗಿ ಪ್ರತಿನಿತ್ಯ ಸುರಿಯುತ್ತಿರುವ ಮಳೆಯಿಂದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.