ಮಳೆಯ ಆರ್ಭಟಕ್ಕೆ ಕೊಚ್ಚಿ ಹೋದ ಹಾವನೂರ್ ಸೇತುವೆ: ವಿದ್ಯಾರ್ಥಿಗಳಿಗೆ ಸಂಕಷ್ಟ

ಕಲಬುರಗಿ.ಆ.4: ತೊಗರಿ ನಾಡಿನಲ್ಲಿ ಈ ವರ್ಷವೂ ವರುಣನ ಅಬ್ಬರ ಜೋರಾಗಿದೆ. ಎಡೆಬಿಡದೇ ಆರ್ಭಟಿಸುತ್ತಿರುವ ಮೇಘರಾಜನ ಆಟಕ್ಕೆ ಸಾಕಷ್ಟು ಆವಾಂತರಗಳು ಸೃಷ್ಟಿಯಾಗಿ ಜನ ಹೈರಾಣಾಗಿದ್ದಾರೆ. ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ನೀರಿನ ರಭಸಕ್ಕೆ ಅಫಜಲಪುರ ತಾಲ್ಲೂಕಿನ ಹಾವನೂರ್ ಗ್ರಾಮದ ಸಂಪರ್ಕ ಸೇತುವೆ ಕೊಚ್ಚಿ ಹೋಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆ ಎದುರಾಗಿದೆ.
ನೀರಿನ ರಭಸಕ್ಕೆ ಸೇತುವೆ ತಡೆಗೋಡೆಗಳು ಛಿದ್ರವಾಗಿ ಬಿದ್ದಿವೆ. ಸೇತುವೆ ಒಡೆದಿರುವುದರಿಂದ ಸಂಪರ್ಕ ಕಡಿತವಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಊರಿಗೆ ಬರುತ್ತಿದ್ದ ಸಾರಿಗೆ ಬಸ್ ಸಂಚಾರವೂ ಸ್ಥಗಿತವಾಗಿದೆ. ಇದರಿಂದ ಕಲಬುರ್ಗಿ ನಗರ ಸೇರಿ ಬೇರೆ, ಬೇರೆ ಕಡೆಗಳಲ್ಲಿ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ಮೂರು ಕಿ.ಮೀ. ದೂರದ ಮುಖ್ಯ ರಸ್ತೆಗೆ ನಡೆದುಕೊಂಡು ಹೋಗುವಂತಹ ದುಸ್ಥಿತಿ ಬಂದೊದಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಹಿನ್ನಡೆಯಾಗುತ್ತಿದೆ.
ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಸೇತುವೆ ಶಿಥಿಲಗೊಂಡಿತ್ತು. ಆದಾಗ್ಯೂ, ಕಳೆದ 20 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳ ತುಂಬಿ ಹರಿದು ಭಾಗಶ: ಸೇತುವೆ ಕೊಚ್ಚಿಕೊಂಡು ಹೋಗಿದೆ. ದ್ವಿಚಕ್ರವಾಹನ ಸವಾರರು ಅಪಾಯದ ನಡುವೆಯೇ ಭಯದಲ್ಲಿ ಹಾನಿಯಾದ ಸೇತುವೆ ದಾಟಿ ಸಂಚಾರ ಮಾಡುತ್ತಿದ್ದಾರೆ. ಕೊಂಚ ಯಾಮಾರಿದರೂ ಅಪಾಯ ಖಂಡಿತ.
ಆದಾಗ್ಯೂ, ಅನಿವಾರ್ಯವಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಅಪಾಯವನ್ನು ಲೆಕ್ಕಿಸದೇ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅದರಲ್ಲಿಯೂ ಸಾರಿಗೆ ಬಸ್ ಸಂಚಾರ ಸ್ಥಗಿತದಿಂದ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆ ಹಾಳಾಗಿರುವ ಕುರಿತು ಶಾಸಕ ಎಂ.ವೈ. ಪಾಟೀಲ್ ಅವರಿಗೆ ತಿಳಿಸಿದ್ದು ಅವರು ಬೇಡಿಕೆಗೆ ಸ್ಪಂದಿಸಿಲ್ಲ. ಬದಲಾಗಿ ಪ್ರಸ್ತಾವನೆ ಸಲ್ಲಿಸಿದ್ದು ಅನುಮೋದನೆ ಸಿಕ್ಕಿಲ್ಲ ಎಂದು ಹೇಳುತ್ತಾರೆ. ಹತ್ತಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಕೇವಲ ಸುಳ್ಳು ಭರವಸೆಗಳೇ ಸಿಗುತ್ತಿವೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸೇತುವೆ ಮುರಿದು ಸಂಚಾರದ ಸಮಸ್ಯೆ ಎದುರಿಸುತ್ತಿರುವ ಕುರಿತು ಶಾಸಕರು ಗಂಭೀರವಾಗಿ ತೆಗೆದುಕೊಂಡು ಸೇತುವೆ ದುರಸ್ತಿ ಇಲ್ಲವೇ ಹೊಸದಾಗಿ ನಿರ್ಮಾಣ ಮಾಡಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಂದು ವಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಸೇತುವೆ ಕೊಚ್ಚಿ ಹೋಗಿದ್ದರಿಂದ ಆ ಮಾರ್ಗದಲ್ಲಿ ಕೇವಲ ದ್ವಿಚಕ್ರವಾಹನಗಳು ಸಂಚರಿಸುತ್ತಿವೆ. ಕಾರು, ಬಸ್ ಸಂಚರಿಸುವುದಿಲ್ಲ. ಆದಾಗ್ಯೂ, ದ್ವಿಚಕ್ರವಾಹನಗಳೂ ಸಹ ಅಪಘಾತಕ್ಕೀಡಾಗಿ ಎರಡ್ಮೂರು ಜನರು ಅಸುನೀಗಿದ್ದಾರೆ. ಇಂತಹ ಅವಘಡಗಳನ್ನು ತಪ್ಪಿಸಲು ಕೂಡಲೇ ಹೊಸ ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಹಾವನೂರ್ ಗ್ರಾಮಕ್ಕೆ ಬಸ್ಸೇ ಇಲ್ಲ. ನಡೆದುಕೊಂಡು ಮುಖ್ಯ ರಸ್ತೆಗೆ ಹೋಗಿ ಬಸ್ ಹಿಡಿದುಕೊಂಡು ಕಾಲೇಜಿಗೆ ಹೋದರೆ ವಿಳಂಬವಾಗುವುದರಿಂದ ಉಪನ್ಯಾಸಕರು ಕಾಲೇಜಿಗೆ ಸೇರಿಸಿಕೊಳ್ಳುವುದಿಲ್ಲ. ಇದರಿಂದ ಪರೀಕ್ಷೆಗೂ ಸಹ ಕೂಡಲಾಗದೇ ಸಂಕಷ್ಟಕ್ಕೆ ಒಳಗಾಗುತ್ತಿವೆ ಎಂದು ಕಾಲೇಜು ವಿದ್ಯಾರ್ಥಿಯೊಬ್ಬ ಅಳಲು ತೋಡಿಕೊಂಡ.