ಮಳೆಯ ಅಬ್ಬರ ಸಿಡಿಲಿಗೆ ಐವರು ಬಲಿ

ಬೆಂಗಳೂರು,ಏ.೧೫-ಕಳೆದ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದವರ ಸಂಖ್ಯೆ ೫ಕ್ಕೆ ಏರಿಕೆಯಾಗಿದೆ.ಕಳೆದ ವರ್ಷ ಅಂದರೆ ೨೦೨೩ರ ಮಾರ್ಚ್‌ನಿಂದ ಆಗಸ್ಟ್‌ವರೆಗೆ ಒಟ್ಟು ೫,೬೪,೭೭೮ ಸಿಡಿಲು ಬಡಿದ ವರದಿಯಾಗಿದೆ. ಮುಂಗಾರು ಪೂರ್ವ ಮಳೆಯ ಸಮಯದಲ್ಲಿ ಹೆಚ್ಚಿನ ಸಿಡಿಲುಗಳು ಸಂಭವಿಸುತ್ತವೆ. ಮೇ ತಿಂಗಳಲ್ಲಿ ೩,೫೪,೦೬೭ ಮಿಂಚಿನ ದಾಳಿಗಳು ದಾಖಲಾಗಿದ್ದರೆ, ಏಪ್ರಿಲ್‌ನಲ್ಲಿ ೧,೨೮,೭೯೩ ಸಿಡಿಲು ದಾಖಲಾಗಿವೆ.
ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ. ೪ ದಿನದಲ್ಲಿ ಮಳೆಗೆ ಮೃತಪಟ್ಟವರ ಸಂಖ್ಯೆ ೫ಕ್ಕೆ ಏರಿಕೆಯಾಗಿದೆ. ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಬೀದರ್, ವಿಜಯಪುರ, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ, ವಿಜಯನಗರ, ಬಳ್ಳಾರಿ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ಶಿವಮೊಗ್ಗ ಸೇರಿದಂತೆ ೧೫ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಕಾಫಿನಾಡಿನ ಚಿಕ್ಕಮಗಳೂರಿನಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಚಿಕ್ಕಮಗಳೂರು ನಗರ ಸೇರಿದಂತೆ ಮೂಡಿಗೆರೆ, ಕೊಪ್ಪ, ಜಯಪುರ, ಬಾಳೆಹೊನ್ನೂರು, ಮಲ್ಲೇನಹಳ್ಳಿ, ಖಾಂಡ್ಯ, ಮುತ್ತೋಡಿಯಲ್ಲಿ ಭಾರಿ ಮಳೆಯಾಗಿದೆ. ಕಳೆದ ೩ ದಿನಗಳಿಂದ ಮಳೆಯಾಗುತ್ತಿರುವುದರಿಂದ ಕಾಫಿನಾಡಿನ ಜನತೆ ನಗೆಗಡಲಲ್ಲಿ ತೇಲುತ್ತಿದ್ದಾರೆ. ಭಾರೀ ಮಳೆಗೆ ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ಜಲಾವೃತಗೊಂಡಿದೆ. ಹೀಗಾಗಿ ಕೆಲಕಾಲ ವಾಹನ ಸವಾರರು ಹರಸಾಹಸ ಪಡಬೇಕಾಯಿತು. ಇನ್ನೊಂದೆಡೆ ಕಡೂರು ತಾಲೂಕಿನ ಕೆಲವೆಡೆ ಮಳೆಯಾಗಿದೆ. ಮತ್ತೊಂದೆಡೆ ಮಳೆಯ ನಡುವೆಯೂ ಜನರು ಬಾಡೂಟವನ್ನು ಸವಿಯುತ್ತಿದ್ದಾರೆ. ಕಾಫಿನಾಡಿನಲ್ಲಿ ವರ್ಷದ ವರುಣಾರ್ಭಟಕ್ಕೆ ಮೊದಲ ಬಲಿಯಾಗಿದ್ದು, ತೋಟಕ್ಕೆ ಹೋಗಿದ್ದ ನ.ರಾ.ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ರೈತ ಶಂಕರ್ (೪೮) ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಶಿವಮೊಗ್ಗದ ಹಲವೆಡೆ ಧಾರಾಕಾರ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ ಎರಡನೇ ದಿನವೂ ಮಳೆಯಾಗಿದ್ದು, ಬಿಸಿಲ ಝಳಕ್ಕೆ ಬೆಳೆ ನಷ್ಟವಾಗುವ ಆತಂಕದಲ್ಲಿ ರೈತರು ತತ್ತರಿಸುವಂತಾಗಿದೆ. ಮತ್ತೊಂದೆಡೆ ಮಳೆರಾಯ ಬಾಗಲಕೋಟೆಗೂ ಭೇಟಿ ನೀಡಿದ್ದಾರೆ. ವಿದ್ಯಾಗಿರಿ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.
ಗಡಿ ಜಿಲ್ಲೆ ಬೀದರ್ ನಲ್ಲಿ ಭಾರೀ ಮಳೆಯಾಗಿದೆ. ಬೀದರ್, ಹುಮನಾಬಾದ್, ಬಸವಕಲ್ಯಾಣ, ಔರಾದ್ ಸೇರಿದಂತೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲೂ ವರುಣನ ಅಬ್ಬರ ಮುಂದುವರಿದಿದೆ. ಗುರುಮಟ್ಕಲ್ ಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ. ಚಂಡಮಾರುತದಿಂದ ತತ್ತರಿಸಿದ್ದ ಜನತೆ ಕೊಂಚ ನಿರಾಳರಾಗಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಂಜುನಾಥ (೨೨) ಮೃತಪಟ್ಟಿದ್ದಾರೆ. ಸಿಡಿಲು ಬಡಿದು ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಂಬಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗದಗ, ಹಾವೇರಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆ
ಗದಗ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಗದಗ, ಲಕ್ಷ್ಮೇಶ್ವರ, ಮುಂಡರಗಿ ಪಟ್ಟಣದಲ್ಲಿ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ವರುಣ ಸಾಂತ್ವನ ನೀಡಿದ್ದಾನೆ. ಗುಜನೂರು, ಮಾಗಡಿ, ಬಟ್ಟೂರು, ಅಕ್ಕಿಗುಂಡಿಯಲ್ಲಿ ೧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲೂ ಮಳೆಯಾಗಿದೆ. ರಾಣೆಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು ತಾಲೂಕಿನಾದ್ಯಂತ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಅಡಕೆ ತೋಟಕ್ಕೆ ನೀರು ನುಗ್ಗಿದೆ.
ಕುಷ್ಟಗಿ ತಾಲೂಕಿನ ಕುಂಬಳಾವತಿಯ ಶಿವಪ್ಪ ಕುಂಟೋಜಿ ಹಾಗೂ ಹುಲಿಯಾಪುರದ ಕುಂಬಳಾವತಿ ಎಂಬುವರಿಗೆ ಸೇರಿದ ೩ ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಹುಲಿಯಾಪುರದ ಬುಡ್ಡೆಪ್ಪ ಲಮಾಣಿ ಎಂಬುವರಿಗೆ ಸೇರಿದ ಹಸು ಹಾವಳಿಗೆ ಬಲಿಯಾಗಿದೆ.
ಬೇಸಿಗೆಯಲ್ಲಿ ಮಳೆಯಿಂದಾಗಿ ಸಾವುಗಳು ವರದಿಯಾಗಿವೆ. ಅಲ್ಲದೇ ಕೊಪ್ಪಳದ ಕುಷ್ಟಗಿ ತಾಲೂಕಿನ ತುಗ್ಗಲಡೋಣಿಯಲ್ಲಿ ದ್ಯಾಮಣ್ಣ ಭಾವಂಜಿ ಎಂಬುವರಿಗೆ ಸೇರಿದ ವಿಳ್ಯೆದೆಲೆ ತೋಟ ಪೂರ್ತಿ ಹಾಳಾಗಿದೆ. ಕೊಯ್ಲು ಹಂತದಲ್ಲಿದ್ದ ತಾಳೆ ಮರವೂ ಬಿರುಗಾಳಿಗೆ ನೆಲಕಚ್ಚಿದ್ದು, ಇದರಿಂದ ರೈತರಿಗೆ ಲಕ್ಷಾಂತರ ರೂ. ಹಾನಿಯಾಗಿದೆ. ಸರಕಾರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.