ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

ಕಲಬುರಗಿ,ಜು.20: ಒಂದೂವರೆ ತಿಂಗಳಿನ ನಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಕಳೆದ ಮೂರು ದಿನಗಳಿಂದ ಮುಂದುವರೆದಿದೆ. ನಿರಂತರ ಸುರಿಯುತ್ತಿರುವ ಜಿಟಿ, ಜಿಟಿ ಮಳೆಯಿಂದಾಗಿ ರಸ್ತೆಗಳು ಕೆರೆಗಳಂತಾಗಿವೆ. ನದಿಗಳಲ್ಲಿ ಪ್ರವಾಹದ ಮಟ್ಟ ಹೆಚ್ಚುತ್ತಿದೆ. ಗಲ್ಲಿ, ಗಲ್ಲಿಗಳ ರಸ್ತೆಗಳು ಕೆಸರಿನಿಂದ ಕೂಡಿದ ಕಚಿಪಿಚಿ ರಸ್ತೆಗಳಾಗಿವೆ. ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹಲವಾರು ಮನೆಗಳಿಗೆ ನೀರು ನುಗ್ಗಿವೆ. ಕಮಲಾಪುರ ಬಳಿ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರಗಳು ಬಿದ್ದು ಸುಮಾರು ಮೂರು ತಾಸುಗಳ ಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಚಿತ್ತಾಪುರದಲ್ಲಿ ಎರಡು ಮನೆಗಳು ಮತ್ತು ಚಿಂಚೋಳಿ ತಾಲ್ಲೂಕಿನಲ್ಲಿ ಒಂದು ಮನೆ ಕುಸಿದಿದೆ. ನಿರಂತರ ಮಳೆಯಿಂದಾಗಿ ಅಲ್ಲಿನ ತಾಲ್ಲೂಕು ಆಡಳಿತಗಳು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದೆ.
ಜಿಲ್ಲೆಯ ಚಿತ್ತಾಪುರ, ಸೇಡಂ ಹಾಗೂ ಚಿಂಚೋಳಿ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ತಾಲ್ಲೂಕು ಆಡಳಿತದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಣೆ ಆಡಲಾಗಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿಯೂ ಮಳೆಯ ಪ್ರಮಾಣವನ್ನು ನೋಡಿಕೊಂಡು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ತಾಲ್ಲೂಕು ಆಡಳಿತಗಳಿಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಸಊಚನೆ ನೀಡಿದ್ದಾರೆ.
ಮೂರು ತಾಲ್ಲೂಕುಗಳಲ್ಲಿ ಆಯಾ ತಹಸಿಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸೇರಿಕೊಂಡು ಬಿರುಸಿನ ಮಳೆಯಾಗುವ ಸಾಧ್ಯತೆ ಇರುವ ಕಾರಣ ಒಂದು ದಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಮಳೆಯಿಂದಾಗಿ ನಗರದಲ್ಲಿ ರಸ್ತೆ, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಚರಂಡಿ ನೀರು ಹಲವೆಡೆ ರಸ್ತೆ ಮೇಲೆ ಹರಡಿದ್ದು ಕಂಡುಬಂತು. ಕೆ.ಆರ್. ನಗರ, ಉದಯನಗರ, ಕೈಲಾಶ್ ನಗರ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುತ್ತಿದ್ದಾರೆ. ಲಾಲ್‍ಗೇರಿ ಕ್ರಾಸ್, ಕೆಬಿಎನ್ ಆಸ್ಪತ್ರೆ ಮುಂಭಾಗದ ರಸ್ತೆಗಳು ಜಲಾವೃತಗೊಂಡಿವೆ. ಹಳೆಯ ಜೇವರ್ಗಿ ರಸ್ತೆ, ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜು ಬಳಿಯ ಒಳ ರೈಲ್ವೆ ಸೇತುವೆ ಮಾರ್ಗಗಳಲ್ಲಿ ಮಳೆ ನೀರು ನಿಂತು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆ ಮುಂದುವರೆದಿರುವುದರಿಂದ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ರಸ್ತೆಗಳಲ್ಲಿ ಸಂಚಾರ ಕಡಿಮೆಯಾಗಿದ್ದರಿಂದ ಖಾಲಿ ಖಾಲಿಯಾಗಿ ಕಂಡುಬರುತ್ತಿವೆ.
ನಗರದ ವಾರ್ಡ್ ನಂಬರ್ 43.ರಲ್ಲಿ ಮದರ್ ತೆರಸಾ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದ ರಸ್ತೆಯಲ್ಲಿ ಕಳೆದ ಒಂದು ತಿಂಗಳಿಂದ ಒಳ ಚರಡಿ ಒಡೆದು ರಸ್ತೆ ಮೇಲೆ ಬಡಾವಣೆಯ ಮುಖಂಡರು, ಶಾಲಾ ಮಕ್ಕಳು ಓಡಾಡಲು ತೊಂದರೆ ಆಗುತ್ತಿದ್ದು, ಮಳೆಯಲ್ಲಿಯಂತೂ ಮತ್ತಷ್ಟು ಸಮಸ್ಯೆಯಾಗಿದೆ, ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು ಎಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಅದೇ ರೀತಿ ವಾರ್ಡ್ ನಂಬರ್ 43ರ ಶಕ್ತಿನಗರದಲ್ಲಿ ಗುರುವಾರ ಮಳೆ ಬಂದಿದಕ್ಕೆ ರಸ್ತೆ ಮೇಲೆ ನೀರು ತುಂಬಿ ಬಡಾವಣೆಯ ಮುಖಂಡರು, ಮಹಿಳೆಯರು, ಶಾಲಾ ಮಕ್ಕಳು ಓಡಾಡಲು ತೊಂದರೆ ಆಗುತ್ತಿದ್ದು, ಕೂಡಲೇ ವಾರ್ಡನ್ ಪಾಲಿಕೆ ಸದಸ್ಯೆ ವರ್ಷಾ ರಾಜೀವ್ ಜಾನೆ ಅವರು ಸಮಸ್ಯೆ ಬಗೆಹರಿಸಬೇಕೆಂದು ಬಡಾವಣೆಯ ಮುಖಂಡರು ಒತ್ತಾಯಿಸಿದ್ದಾರೆ.

ಹೆದ್ದಾರಿಗೆ ಬಿದ್ದ ಹೆಮ್ಮರಗಳು: ಜಿಲ್ಲೆಯ ತಾಲ್ಲೂಕು ಕೇಂದ್ರ ಕಮಲಾಪುರ ಪಟ್ಟಣದಲ್ಲಿನ ತಹಸಿಲ್ದಾರ್ ಕಚೇರಿಯ ಬಳಿ ಇರುವ ಬೀದರ್- ಶ್ರೀರಂಗಪಟ್ಟಣ ಹೆದ್ದಾರಿಯ ಮೇಲೆ ಬೃಹತ್ ಗಾತ್ರದ ಹೆಮ್ಮರಗಳು ಬಿದ್ದು ಇಡೀ ಸಂಚಾರ ಅಸ್ತವ್ಯಸ್ತಗೊಂಡಿತು.
ರಸ್ತೆ ಮೇಲೆ ಬಿದ್ದ ಮರಗಳನ್ನು ಮೂರು ತಾಸುಗಳ ಕಾರ್ಯಾಚರಣೆಯ ನಂತರ ತೆರವುಗೊಳಿಸಲಾಯಿತು. ಪರಿಣಾಮ ನಂತರ ಆ ಮಾರ್ಗದಲ್ಲಿ ವಾಹನಗಳ ಸಂಚಾರ ಸುಗಮವಾಗಿ ಪುನರಾರಂಭಗೊಂಡಿತು.
ಚಿತ್ತಾಪುರದಲ್ಲಿ ಮನೆಗಳ ಕುಸಿತ: ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಕಳೆದ ಬುಧವಾರ ರಾತ್ರಿಯಿಂದ ಧಾರಕಾರವಾಗಿ ಸುರಿಯುತ್ತಿರವ ಮಳೆಗೆ ಪಟ್ಟಣದ ವಾಡ್ ನಂಬರ್ 9ರಲ್ಲಿ ಹಾಗೂ 11ರಲ್ಲಿ ತಲಾ ಒಂದೊಂದು ಮನೆ ಕುಸಿತಗೊಂಡಿವೆ ವಾರ್ಡ್ ನಂಬರ್ 9ರಲ್ಲಿ ರಾಜಮ್ಮ ಅಯ್ಯಣ್ಣ ಅಳೋಳ್ಳಿಕರ್ ಹಾಗೂ ವಾರ್ಡ್ ನಂಬರ್ 11ರಲ್ಲಿ ಮೊಹಮ್ಮದ್ ಮಶಾಖ್ ಅವರ ಮನೆಗಳು ಕುಸಿದಿದ್ದು, ಅದೃಷ್ಟವಶಾತ್ ಆ ಮನೆಗಳ ನಿವಾಸಿಗಳು ಜೀವದ ಅಪಾಯದಿಂದ ಪರಾಗಿದ್ದಾರೆ.
ಸ್ಥಳಕ್ಕೆ ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ್ ಬಂಕಲಗಿ, ಮುಖ್ಯಾಧಿಕಾರಿ ಮನೋಜಕುಮಾರ್ ಗುರಿಕಾರ್, ಕಂದಾಯ ನಿರೀಕ್ಷಕ ಮದುಸೂಧನ್ ಘಾಳೆ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಪರಿಹಾರಕ್ಕಾಗಿ ಮೇಲಾಧಿಕಾರಿಗಳಗೆ ವರದಿ ಸಲ್ಲಿಸಿಲಾಗಿದೆ ಎಂದು ಮುಖ್ಯಾಧಿಕಾರಿ ಮನೋಜಕುಮಾರ್ ಅವರು ತಿಳಿಸಿದ್ದಾರೆ. ಚಿತ್ತಾಪುರದಲ್ಲಿ 35.2 ಮಿ.ಮಿ, ಅಳ್ಳೋಳ್ಳಿಯಲ್ಳ 23.4 ಮಿ.ಮಿ. ನಾಲವಾರ್‍ದಲ್ಲಿ 34.8 ಮಿ.ಮಿ., ಗುಂಡಗುರ್ತಿಯಲ್ಲಿ 12.2.ಮಿ.ಮಿಯಷ್ಟು ಮಳೆಯಾಗಿದೆ.
ಚಿಂಚೋಳಿ ವರದಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕನಕಪುರ ಗ್ರಾಮದ ಪಾಂಡುರಂಗ್ ಸಂಬಣ್ಣ ಮೇತ್ರಿ ಅವರ ಮನೆಯು ಕುಸಿದಿದೆ. ನಿರಂತರ ಮಳೆಯಿಂದಾಗಿ ಸುಲೇಪೇಟ್ ಗ್ರಾಮದಲ್ಲಿ ರಸ್ತೆ ಮೇಲೆ ಮಳೆಯ ನೀರು ಪ್ರವಾಹದ ರೂಪದಲ್ಲಿ ಹರಿಯುತ್ತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ಚಿಂಚೋಳಿ ತಾಲ್ಲೂಕಿನಲ್ಲಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ರಸ್ತೆಗಳ ಮಧ್ಯದಲ್ಲಿ ಅಲ್ಲೊಂದು, ಇಲ್ಲೊಂದು ಗುಂಡಿಗಳು ಬಿದ್ದಿವೆ. ಆ ಗುಂಡಿಗಳೆಲ್ಲವೂ ಮಳೆಯ ನೀರಿನಲ್ಲಿ ತುಂಬಿಕೊಂಡಿದ್ದು ವಾಹನಗಳ ಸಂಚಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲಿಯೂ ಶ್ರೀ ಸಂಗಮೇಶ್ವರ್ ಮೆಡಿಕಲ್ ಮತ್ತು ಜನರಲ್ ಸ್ಟೋರ್ ಮುಂಭಾಗದಲ್ಲಿ ದೊಡ್ಡ ಪ್ರಮಾಣದ ಗುಂಡಿ ಬಿದ್ದಿದೆ. ಇದರಿಂದಾಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಆ ರಸ್ತೆ ಮೂಲಕ ಶಾಲೆ ಮತ್ತು ಕಾಲೇಜಿಗೆ ಹೋಗಬೇಕಾಗುತ್ತಿದೆ. ಕೊಳಚೆ ನೀರಿನಲ್ಲಿಯೇ ಪ್ರತಿ ದಿನ ಹೋಗುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಎರಡ್ಮೂರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮಹರಿಸಬೇಕು ಎಂದು ಶಿವಕುಮಾರ್ ಕುಂಬಾರ್ ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಚಿಂಚೋಳಿ ತಾಲ್ಲೂಕಿನ ಜನರು ಅನೇಕ ರೋಗ, ರುಜಿನಿಗಳಿಗೆ ತುತ್ತಾಗುತ್ತಿದ್ದು, ಮಳೆ ಮತ್ತು ಕೊಳಚೆ ನೀರು ಸಂಗ್ರಹದಿಂದ ವಿವಿಧ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆ ಇದ್ದು, ಅಧಿಕಾರಿಗಳು ಗಮನಹರಿಸಬೇಕು ಎಂದು ವೀರೇಶ್ ತೆಲ್ಕೂರ್ ಅವರು ಆಗ್ರಹಿಸಿದ್ದಾರೆ.
ಮುಲ್ಲಾಮಾರಿಗೆ ಪ್ರವಾಹ: ಚಿಂಚೋಳಿ ತಾಲ್ಲೂಕಿನ ಮುಲ್ಲಾಮಾರಿ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚುತ್ತಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಠೋಡ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನದಿ ಪಾತ್ರದಲ್ಲಿ ಬರುವ ಗ್ರಾಮಗಳಲ್ಲಿ ಡಂಗುರ ಹೊಡೆಯಲು ತಿಳಿಸಿ, ನದಿಯ ಸಮೀಪ ಹೋಗದಂತೆ ಎಚ್ಚರವಹಿಸಲು ಸೂಚಿಸಿದರು. ನಂತರ ಅಧಿಕಾರಿ ಗಾರಂಪಳ್ಳಿ ಮತ್ತು ಚಿಮ್ಮಾಯಿದ್ಲಾಯಿ ಗ್ರಾಮಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದರು.