ಮಳೆಯಿಂದ ಹಾನಿ: ತುರ್ತಾಗಿ ಪರಿಹಾರ ನೀಡಲು ಡಿಸಿ ಸೂಚನೆ

ತುಮಕೂರು, ನ. ೨೨- ಜಿಲ್ಲೆಯಲ್ಲಿ ಸತತವಾಗಿ ಬಿಡದೆ ಸುರಿಯುತ್ತಿರುವ ಮಳೆಯಿಂದ ಮನುಷ್ಯರು ಮತ್ತು ಜಾನುವಾರುಗಳ ಪ್ರಾಣ ಹಾಗೂ ಮನೆ, ಬೆಳೆ ಹಾನಿಯಾಗಿದ್ದಲ್ಲಿ ಆಯಾ ತಹಶೀಲ್ದಾರ್‌ಗಳು ಖುದ್ದು ಪರಿಶೀಲಿಸಿ ತುರ್ತಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಮಾನವ ಮತ್ತು ಜಾನುವಾರು ಪ್ರಾಣ ಹಾನಿ ಉಂಟಾದಲ್ಲಿ ತಹಶೀಲ್ದಾರ್ ಮತ್ತು ಪಶು ಸೇವಾ ಮತ್ತು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರು ಖುದ್ದು ಪರಿಶೀಲಿಸಿ ನಿಯಮಾನುಸಾರ ಅರ್ಹ ಪ್ರಕರಣಗಳಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ನವೆಂಬರ್ ಮಾಹೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಒಂದು ಮಾನವ ಪ್ರಾಣಹಾನಿ, ೩೨ ಜಾನುವಾರುಗಳ ಪ್ರಾಣ ಹಾನಿ, ಸುಮಾರು ೩೧೦ ಮನೆಗಳು ಭಾಗಶಃ ಹಾನಿ ಉಂಟಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆ ಹಾನಿಯಾಗಿದೆ. ಅಂತೆಯೇ ತೋಟಗಾರಿಕಾ ಬೆಳೆಗಳ ಹಾನಿಯಾಗಿದ್ದು, ಹಾನಿಗೊಳಗಾಗಿರುವ ಪ್ರಕರಣಗಳ ಸಂಬಂಧ ಅಧಿಕಾರಿಗಳು ಪರಿಶೀಲನೆ ಮತ್ತು ಸರ್ವೇ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಮಳೆಯಿಂದ ಮನೆಗಳಿಗೆ ಹಾನಿ ಉಂಟಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿಗೊಳಗಾಗಿರುವ ಮನೆಯ ೪ ದಿಕ್ಕಿನ ಛಾಯಾಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ಪಡೆದು ಹಾನಿಯ ಪ್ರಮಾಣದ ಅನುಸಾರ ತಕ್ಷಣವೇ ತಂತ್ರಾಂಶದಲ್ಲಿ ಮಾಹಿತಿ ನಮೂದಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆ ನಷ್ಟದ ಕುರಿತು ಸಂಬಂಧಿಸಿದ ಅಧಿಕಾರಿಗಳು ಜಂಟಿ ಸಮೀಕ್ಷೆಯನ್ನು ಕೈಗೊಂಡು ಬೆಳೆ ಹಾನಿಯ ಬಗ್ಗೆ ಪರಿಹಾರ ತಂತ್ರಾಂಶದಲ್ಲಿ ಮಾಹಿತಿಯನ್ನು ಕೇಂದ್ರೀಕರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಂಟಿ ಸಮೀಕ್ಷೆಯಲ್ಲಿ ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡು ತುರ್ತಾಗಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಮಳೆಯಿಂದಾದ ಹಾನಿಗೆ ಪರಿಹಾರ ನೀಡಲು ಸಂಬಂಧಿಸಿದ ಪರಿಹಾರ ತಂತ್ರಾಂಶದಲ್ಲಿ ಹಾನಿ ಪ್ರಕರಣಗಳ ಮಾಹಿತಿಯನ್ನು ನಮೂದಿಸಲು ನವೆಂಬರ್ ೩೦ ಕಡೆಯ ದಿನವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಎಲ್ಲಾ ಅರ್ಹ ಪ್ರಕರಣಗಳನ್ನು ಸದರಿ ತಂತ್ರಾಂಶದಲ್ಲಿ ನಮೂದಿಸಬೇಕು. ಸಕಾಲದಲ್ಲಿ ನಮೂದಿಸದೆ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಮಳೆಯಿಂದಾದ ಹಾನಿ ಪ್ರಕರಣಗಳ ಪರಿಸ್ಥಿತಿ ಬಗ್ಗೆ ಖುದ್ದು ಅವಲೋಕಿಸಬೇಕೆಂದು ಸೂಚಿಸಿದರು.
ಹೆಚ್ಚಿನ ಮಳೆಯ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಎಲ್ಲಾ ಸಿಬ್ಬಂದಿಗಳು ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ನಿರ್ದೇಶನ ನೀಡಿದರು.
ಮಳೆಯಿಂದ ರಸ್ತೆ, ಕೆರೆ, ಮನೆ ಸೇರಿದಂತೆ ಯಾವುದೇ ಹಾನಿಗೆ ಸಂಬಂಧಿಸಿದ ದೂರು, ಮನವಿ ಬಂದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ, ಹೇಮಾವತಿ ನಾಲಾ ವಲಯದ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆ, ನಾಲೆಗಳ ನೀರಿನ ಮಟ್ಟ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಕೆರೆ,ನಾಲಾ ಬಫರ್ ಜೋನ್‌ಗಳಲ್ಲಿ ಅಥವಾ ನೆರೆಯಿಂದ ಹಾನಿ ಉಂಟಾಗಬಹುದಾದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕೆಂದು ಸೂಚಿಸಿದರಲ್ಲದೆ, ಸದರಿಯವರ ಸುರಕ್ಷತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮಳೆಯಿಂದ ಹಾನಿಯಾದ, ಹಾನಿಯಾಗಬಹುದಾದ ಅಂಗನವಾಡಿ, ಸರ್ಕಾರಿ ಶಾಲಾ ಕೊಠಡಿ,ಹಾಸ್ಟೆಲ್‌ಗಳ ಸಮೀಕ್ಷೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು. ಮಳೆಯಿಂದ ರಸ್ತೆ ಸಂಪರ್ಕ, ಸೇತುವೆ ಕುಸಿದು ಸಂಚಾರಕ್ಕೆ ತೊಂದರೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸಂಪರ್ಕ ಕಡಿತವಾಗಿರುವ ರಸ್ತೆ, ಸೇತುವೆಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕ ಮತ್ತು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ, ಈಗಾಗಲೇ ಮಾರ್ಕೋನಹಳ್ಳಿ ಡ್ಯಾಂಗೆ ನೀರಿನ ಒಳ ಹರಿವು ಹೆಚ್ಚಾಗಿದ್ದು, ಸುಮಾರು ೬ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಡ್ಯಾಂಗೆ ಒಳ ಹರಿವಿನ ನೀರಿನ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಹೊರ ಹರಿವಿನ ನೀರಿನ ಪ್ರಮಾಣ ಹೆಚ್ಚುಗೊಳಿಸುವ ಸಾಧ್ಯತೆ ಇದೆ. ಹಾಗಾಗಿ ಡ್ಯಾಂ ಹಿಂಭಾಗದಲ್ಲಿರುವ ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕಾಳಜಿ ಕೇಂದ್ರ, ವಸತಿ ಮತ್ತು ಊಟದ ವ್ಯವಸ್ಥೆ ಮಾಡಲು ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.