ಮಳೆಯಿಂದ ಹಾನಿಗೊಳಗಾದ ರೈತರಿಗೆ ಕೂಡಲೇ ಅಗತ್ಯ ಪರಿಹಾರ ಒದಗಿಸಿಃ ಜಿ.ಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ

ವಿಜಯಪುರ, ನ.22-ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಬೀಜ, ಗೊಬ್ಬರ ಇನ್ನೀತರ ಅಗತ್ಯ ಪರಿಹಾರವನ್ನು ಕೂಡಲೇ ಒದಗಿಸಿ, ರೈತರಿಗೆ ಹನಿ ನೀರಾವರಿಯಂತಹ ಯೋಜನೆಗಳನ್ನು ಜಾರಿಗೊಳಿಸಿ, ಬೆಳೆಗಳ ವಿಮೆ ಯೋಜನೆಯನ್ನು ಜಾರಿಗೊಳಿಸಿ, ತಾಡಪತ್ರಿಗಳ ವಿತರಣೆಯಲ್ಲಿ ಕೇಳಿಬರುತ್ತಿರುವ ದೂರುಗಳನ್ನು ಪರಿಗಣಿಸಿ, ಸರಿಪಡಿಸಿ, ಬಡರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಲು ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲೂಕ ಪಂಚಾಯತ ಭವನದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಶಾಲೆಗಳ ಎಸ್‍ಡಿಎಮ್‍ಸಿ ಸದಸ್ಯರ ಬಗ್ಗೆ ಕೇಳಿಬರುತ್ತಿರುವ ದೂರುಗಳ ಬಗ್ಗೆಯೂ ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.
ತಾಲೂಕುಗಳಲ್ಲಿ ಮಳೆಯಿಂದ ಹಾನಿಗೊಳಗಾದ ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸುವ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕೆಂದು ಅದರಂತೆ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ವಿತರಣೆಯಲ್ಲಿನ ಲೋಪದೋಪಗಳನ್ನು ಕೂಡಲೇ ಸರಿಪಡಿಸಬೇಕೆಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ತೋಟಗಾರಿಕೆ ಬೆಳೆಯ ರೈತರಿಗೂ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವಂತೆ, ವಿವಿಧ ಕಡೆಗಳಲ್ಲಿ ಕೆಟ್ಟುಹೋಗಿರುವ ನೀರಿನ ಆರ್‍ಒ ಪ್ಲಾಂಟ್‍ಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರೂಪಿಸಲಾಗಿರುವ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಕಾರ್ಡ್ ಯೋಜನೆಯು ಅರ್ಹ ಬಡವರಿಗೆ ತಲುಪುವಂತೆ ಈ ಕುರಿತು ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಜಾಗೃತಿಯನ್ನುಂಟು ಮಾಡಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.