ಮಳೆಯಿಂದ ಬೆಳೆ ಹಾನಿ, 68.67 ಕೋಟಿ ರೂ. ಇನ್ನಪುಟ್ ಸಬ್ಸಿಡಿ ರೈತರ ಖಾತೆಗೆ ಜಮೆ

ಕಲಬುರಗಿ,ನ.30: ಕಳೆದ ಜುಲೈ-ಸೆಪ್ಟೆಂಬರ್ ಮಾಹೆಯಲ್ಲಿ ಬಿದ್ದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಅಪಾರ‌ ಪ್ರಮಾಣದ‌ ಬೆಳೆ ಹಾನಿಯಾಗಿದ್ದು, ಇದೂವರೆಗೆ ಆರು‌ ಕಂತುಗಳಲ್ಲಿ 79,673 ಫಲಾನುಭವಿಗಳಿಗೆ 68.67 ಕೋಟಿ ರೂ. ಇನಪುಟ್ ಸಬ್ಸಿಡಿಯನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಜಿಲ್ಲೆಯ ಕಲಬುರಗಿ, ಕಾಳಗಿ, ಚಿಂಚೋಳಿ, ಚಿತ್ತಾಪೂರ, ಆಳಂದ, ಅಫಜಲಪೂರ ಜೇವರ್ಗಿ, ಶಹಾಬಾದ, ಸೇಡಂ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಬೆಳೆ ಹಾನಿಗೊಳಗಾಗಿದ್ದವು. ಕಂದಾಯ ಮತ್ತು ಕೃಷಿ ಇಲಾಖೆಯು ಜಂಟಿ‌ ಸಮೀಕ್ಷೆ ನಡೆಸಿ ಸುಮಾರು 7,32,872 ಹೆಕ್ಟೇರ್ ಬೆಳೆ ಹಾನಿಯಾದ ಕಾರಣ‌ ಬೆಳೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಬೆಳೆ ಪರಿಹಾರಕ್ಕಾಗಿ ರೈತರ ಮಾಹಿತಿಯನ್ನು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದ್ದು, ಇದೀಗ 7ನೇ ಹಂತದಲ್ಲಿ 9,715 ಫಲಾನುಭವಿಗಳಿಗೆ 747.85 ಲಕ್ಷ ಇನ್ ಪುಟ್ ಸಬ್ಸಿಡಿಯನ್ನು ಜಮೆ ಮಾಡಲು ಅನುಮೋದನೆ ದೊರೆತಿದೆ.

ಶೀಘ್ರದಲ್ಲಿಯೇ ರೈತರ ಬ್ಯಾಂಕ್ ಖಾತೆಗಳಿಗೆ 747.85 ಲಕ್ಷ ರೂ. ಪರಿಹಾರ ಧನವನ್ನು ಜಮೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.