ಮಳೆಯಿಂದ ಬೆಳೆ ನಾಶ: ಪರಿಶೀಲನೆ


ಲಕ್ಷ್ಮೇಶ್ವರ, ನ21: ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಮೀನುಗಳಲ್ಲಿ ಪೈರುಗಳು ನಾಶವಾಗಿದ್ದು, ಇಲ್ಲಿನ ಗ್ರಾಮದ ಯತ್ನಳ್ಳಿ ಮತ್ತು ಯಳವತ್ತಿ ಗ್ರಾಮಗಳಿಗೆ ತಹಶೀಲ್ದಾರ್ ನೇತೃತ್ವದ ತಂಡ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದಕ್ಕೂ ಮುಂಚೆ ಯತ್ನಳ್ಳಿ ಗ್ರಾಮದಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್. ಬಿ. ಪಾಟೀಲ್ ಬೆಳೆ ಸಮೀಕ್ಷೆಗೆ ಬರುತ್ತಿದ್ದಂತೆಯೇ ಅಸಮಾಧಾನಗೊಂಡಿದ್ದ ನೂರಾರು ರೈತರು ಅವರನ್ನು ತರಾಟೆಗೆ ತೆಗೆದುಕೊಂಡು ಹಿರಿಯ ಅಧಿಕಾರಿಗಳು ಬರುವವರೆಗೂ ಬಿಡುವುದಿಲ್ಲ ಎಂದು ಅವರನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕುಳ್ಳಿರಿಸಿದರು.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಬ್ರಮರಾಂಬ ಗುಬ್ಬಿಶೆಟ್ಟಿ ಅವರು ಸಂಬಂಧಿಸಿದ ಕೃಷಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ಯತ್ನಳ್ಳಿ ಗ್ರಾಮಕ್ಕೆ ಬರುವಂತೆ ಸೂಚನೆ ನೀಡಿದ್ದಾರೆ. ಅದೇ ವೇಳೆಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಸುರೇಶ್ ಕುಂಬಾರ್ ಅವರು ಗ್ರಾಮಕ್ಕೆ ಆಗಮಿಸಿದ್ದಾರೆ.
ಈ ಮೊದಲೇ ಜಮಾಯಿಸಿದ್ದ ನೂರಾರು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಿಂಗಳ ಹಿಂದೆಯೇ ಬೆಳೆಹಾನಿ ಗಿಡದ ಬಗ್ಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದೆವು. ಈಗ ಏಕೆ ಬಂದಿರಿ ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಇದರಿಂದ ವಿಚಲಿತಗೊಂಡ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಸಮಜಾಯಿಸಲು ಪ್ರಯತ್ನಿಸಿದ್ದಾರೆ.
ನಂತರ ಪರಿಸ್ಥಿತಿ ಶಾಂತವಾಗುತ್ತಿದ್ದಂತೆಯೇ ತಹಶೀಲ್ದಾರರು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಿ ಎರಡು-ಮೂರು ದಿನಗಳಲ್ಲಿ ಸಮೀಕ್ಷೆ ಮಾಡಿ ವರದಿ ನೀಡುವಂತೆ ತಿಳಿಸಿದ್ದಾರೆ. ಬಳಿಕ ಅಧಿಕಾರಿಗಳು ಹಾನಿಗೀಡಾದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅದೇ ರೀತಿ ಯಳವತ್ತಿ ಗ್ರಾಮದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ರೈತರ ಅಹವಾಲನ್ನು ಆಲಿಸಿದೆ.
ಕೃಷಿ ಇಲಾಖೆಯ ಸಂತೋಷ್ ಬಾಬು, ಚಂದ್ರಶೇಖರ್ ನರಸಮ್ಮನವರ, ಹೊನ್ನಪ್ಪನವರ್, ಕಂದಾಯಾಧಿಕಾರಿ ಬಿ. ಎಂ. ಕಾತ್ರಾಳ ಮತ್ತು ಗ್ರಾಮಲೆಕ್ಕಾಧಿಕಾರಿ ವಿಭೂತಿ ಇದ್ದರು.
ಯತ್ನಳ್ಳಿ ಗ್ರಾಮದಲ್ಲಿ ಮುಖಂಡರಾದ ಸಿ. ವಿ. ಪಾಟೀಲ್, ಎಸ್. ಸಿ. ಪಾಟೀಲ್, ಸಿ. ಎನ್. ಬೆಟದೂರ, ಎಸ್. ಎಸ್. ರಾಯನಗೌಡ, ಆರ್. ವಿ. ಕುಂದಗೋಳ, ಸಿ. ಎಸ್. ಮಟ್ಟಿ, ಎಮ್. ವಿ. ನೇಕಾರ್, ಶೇಖರ್‍ಗೌಡ್ರು ಪಾಟೀಲ್, ವಿ. ಆರ್. ಪಾಟೀಲ್, ಎಂ. ಸಿ. ಮದನೂರ ಸೇರಿದಂತೆ ಅನೇಕರಿದ್ದರು.