ಮಳೆಯಿಂದ ಜಿಲ್ಲೆಯಲ್ಲಿ ಅಪಾರ ನಷ್ಟ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.25:- ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ 6900 ಹೆಕ್ಟೇರ್ ಹಾಗೂ ತೋಟಗಾರಿಕೆಯಲ್ಲಿ 4 ಸಾವಿರ ಹೆಕ್ಟೇರ್ ಹಾನಿಯಾಗಿದೆ. ವಿವಿಧ ಕಡೆಗಳಲ್ಲಿ 6 ಮನೆಗಳು ಕುಸಿದಿದ್ದು, 60 ಮನೆಗಳ ಗೋಡೆ ಕುಸಿದಿದೆ. ಬಿದ್ದು ಹೋಗಿರುವ ಮನೆಗಳಿಗೆ 50 ಸಾವಿರ ಪರಿಹಾರ ನೀಡಲಾಗಿದ್ದು, ಗೋಡೆ ಕುಸಿತಗೊಂಡಿರುವ ಮನೆಗಳಿಗೆ ರಿಪೇರಿಗೆ 25 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ಕುಮಾರಸ್ವಾಮಿ ಅವರು ಅತಿವೃಷ್ಟಿ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಿ, ಇದರ ಹೊರತು ರಾಜಕೀಯಕ್ಕಾಗಿ ಮುಂದಾದರೆ ಅದಕ್ಕೆ ಉತ್ತರ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೈಕಮಾಂಡ್ ನಿರ್ಧರಿಸಲಿದೆ: ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್ ಸದಸ್ಯರಾಗುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಮಹದೇವಪ್ಪ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲಿ ಎಂಬ ಹೈಕಮಾಂಡ್ ಸೂಚನೆಯಂತೆ ಯತೀಂದ್ರ ಅವರು ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು. ಹೀಗಾಗಿ ಇವತ್ತಿನ ಸಂದರ್ಭದಲ್ಲಿ ಯತೀಂದ್ರ ಅವರಿಗೆ ಪರಿಷತ್ ಸ್ಥಾನ ನೀಡುವ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವ ಕಾರಣಕ್ಕೆ ವಿಧಾನ ಪರಿಷತ್‍ಗೆ ಲಾಭಿ ಕೂಡ ಹೆಚ್ಚಾಗಿದೆ ಎಂದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಯಾವುದೇ ಧಕ್ಕೆ ಇಲ್ಲ, ನಾವು ಈ ಚುನಾವಣೆ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಬ್ಬರಿಗೂ ತೃಪ್ತಿ ಇದೆ
ಮೈಸೂರು ಹಾಗೂ ಚಾಮರಾಜನಗರ ಉಸ್ತುವಾರಿ ಸಚಿವರುಗಳ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಕೆ. ವೆಂಕಟೇಶ್ ಅವರು ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವದ್ವಯರು, ಜಿಲ್ಲಾ ಉಸ್ತುವಾರಿ ಬದಲಿಸುವಂತೆ ನಾವು ಕೇಳಿಲ್ಲ. ಇರುವುದರಲ್ಲಿ ಇಬ್ಬರಿಗೂ ತೃಪ್ತಿ ಇದ್ದು, ಇಬ್ಬರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಪೈಪೆÇೀಟಿ ಇಲ್ಲ. ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಸ್ಪಷ್ಟನೆ ನೀಡಿದರು.