ಮಳೆಯಿಂದಾದ ಬೆಳೆ, ಮನೆ ಹಾನಿಗೆ ಪರಿಹಾರಕ್ಕೆ ಒತ್ತಾಯ.

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.24: ಮಳೆಯಿಂದಾಗಿ ರಾಜ್ಯದಲ್ಲಿ ರೈತರು ಬೆಳೆ ಹಾಗೂ ಮನೆಗಳನ್ನು ಕಳೆದುಕೊಂಡಿದ್ದಾರೆ. ಕೆಲವು ಜೀವವೂ ಬಲಿಯಾಗಿದೆ. ಆದ್ದರಿಂದ ಬೆಳೆಹಾನಿಗೆ ಪರಿಹಾರ ನೀಡಬೇಕು ಹಾಗೂ ಮನೆಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಮತ್ತು ಮೃತರ ಕುಟಂಬಕ್ಕೆ ಸೂಕ್ತ ಪರಿಹಾರ ನೀಡುವುದನ್ನು ಸಮರೋಪಾದಿಯಲ್ಲಿ ನಡೆಸಬೇಕೆಂದು ರೈತ – ಕೃಷಿ ಕಾರ್ಮಿಕರ ಸಂಘಟನೆ – ಆರ್‍ಕೆಎಸ್ (ಎಐಕೆಕೆಎಂಎಸ್) ಒತ್ತಾಯಿಸುತ್ತದೆ.
ಈ ಕುರಿತಂತೆ ಕೊಱ್ಲಗುಂದಿ ಗ್ರಾ.ಪಂ. ಲೆಕ್ಕಾಧಿಕಾರಿಗೆ ಮನವಿ ಸಲ್ಲಿಸಿದೆ.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಮಳೆ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಬೆಳೆ ನಷ್ಟವನ್ನು ತುಂಬಿಕೊಡಬೇಕು; ಹಾನಿಗೊಳಗಾದ ಮನೆಗಳನ್ನು ದುರಸ್ತಿ ಮಾಡುವ ಮತ್ತು ಪೂರ್ತಿ ಹಾಳಾಗಿದ್ದರೆ ಹೊಸದಾಗಿ ಕಟ್ಟಿಕೊಡುವ ವ್ಯವಸ್ಥೆಯನ್ನು ಮಾಡಬೇಕು; ಸಾವಗೀಡಾದವರ ಕುಟುಂಬಗಳಿಗೆ ಪರಿಹಾರವನ್ನು ತುರ್ತಾಗಿ ನೀಡಬೇಕು; ಕೆರೆಗಳನ್ನು ದುರಸ್ತಿ ಮಾಡಬೇಕು ಎಂದು ಆರ್‍ಕೆಎಸ್, ಕರ್ನಾಟಕ ರಾಜ್ಯ ಸಮಿತಿಯು ಒತ್ತಾಯಿಸುತ್ತದೆ ಎಂದು ಸಂಘಟನೆಯ ಮುಖಂಡ ಗೋವಿಂದ್ ಮತ್ತು ಈ ಗೋಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.