
ಚಿತ್ರದುರ್ಗ.ಮೇ.೨೪; ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಯಾವುದೇ ಜೀವಹಾನಿ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ಥರಿಗೆ 48 ಗಂಟೆಯೊಳಗಾಗಿ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ, ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಮಳೆ ಹಾನಿಗೆ ಸಂಬಂಧಪಟ್ಟಂತೆ ಮನೆ ಹಾನಿ, ಬೆಳೆ ಹಾನಿ, ಜಾನುವಾರು ಹಾಗೂ ಜೀವಹಾನಿ ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದು ತಕ್ಷಣವೇ ಪರಿಹಾರ ನೀಡಬೇಕು. ತಹಸಿಲ್ದಾರರು ವಿಳಂಬಕ್ಕೆ ಅವಕಾಶ ಮಾಡಿಕೊಡದೆ, ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ವರದಿ ಪಡೆದು, ಆಯಾ ಕ್ಷೇತ್ರಗಳ ಜನಪ್ರತಿನಿಧಿಗಳ ಗಮನಕ್ಕೆ ತಂದು 48 ಗಂಟೆಯೊಳಗಾಗಿ ಸಂತ್ರಸ್ತರಿಗೆ ಮಾರ್ಗಸೂಚಿಯನುಸಾರ ಪರಿಹಾರ ನೀಡಬೇಕು. ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಬಹುದಾದ ಹಾನಿ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವ ಮೂಲಕ ಯಾವುದೇ ಜೀವಹಾನಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್ ನಾಗವೇಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಜಂಟಿಕೃಷಿ ನಿರ್ದೇಶಕ ರಮೇಶ್ ಕುಮಾರ್, ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.