ಮಳೆಬೆಳೆಗಾಗಿ ಗ್ರಾಮ ದೇವತೆ ಊರಮ್ಮ ದೇವಿ ತನುಕೊಡ ಅರ್ಪಣೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.12: ಸಮೃದ್ಧ ಮಳೆಬೆಳೆ, ಗ್ರಾಮದ ಸುಭೀಕ್ಷೆಗಾಗಿ ಗ್ರಾಮದೇವತೆ ಊರಮ್ಮ ದೇವಿ ತನುಕೊಡ ಅರ್ಪಣೆ ಕಾರ್ಯವನ್ನು ಮಂಗಳವಾರ ಭಕ್ತರು ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದರು.
ಸಮೀಪದ ಕಲ್ಲಳ್ಳಿ ಹಾಗೂ ರಾಜಾಪುರ ಗ್ರಾಮದಿಂದ ಊರಮ್ಮ ದೇವಿ ತನುಕೊಡವನ್ನು ಮೆರವಣಿಗೆ ಮೂಲಕ ಹೊತ್ತು ತಂದ ನೂರಾರು ಭಕ್ತರು, ನಗರದ ಅನಂತಶಯನ ಗುಡಿ ಬಳಿಯಿಂದ ಮಲಪನಗುಡಿ ಗ್ರಾಮದ ವರೆಗೆ ಭಕ್ತಿಯಿಂದ ಬಿಳ್ಕೊಟ್ಟರು.  ವರುಣ ಕೃಪೆಗಾಗಿ ಸುಮಂಗಳೆಯರು ಮೆರವಣಿಗೆಯುದಕ್ಕೂ ದೇವಿಯನ್ನು ಪ್ರಾರ್ಥಿಸಿದರು. ಭಕ್ತರು, ಉಧೋ, ಉಧೋ ಎಂಬ ಜಯಘೋಷ ಮೊಳಗಿಸಿದರು.
ದಾರಿಯುದಕ್ಕೂ ಭಕ್ತರು, ದೇವಿಗೆ ಧವಸ ಧಾನ್ಯ, ಹೂ-ಹಣ್ಣು-ಕಾಣಿಕೆಯನ್ನು ಸಮರ್ಪಿಸಿದರು. ಮೆರವಣಿಗೆ ಹಿಂಭಾಗದಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್‍ನಲ್ಲಿ ಗೋಣಿ ಚೀಲದಲ್ಲಿ ರಾಶಿಗಟ್ಟಲೆ ಜೋಳ, ರಾಗಿ, ಅಕ್ಕಿ, ಇತರೆ ಪದಾರ್ಥಗಳನ್ನು ಕಾಣಿಕೆಯಾಗಿ ಸಲ್ಲಿಸಿದರು.
ದೇವಿಯ ತನುಕೊಡ ಹೊತ್ತ ಭಕ್ತನ ಪಾದಗಳನ್ನು ತೊಳೆದು, ಭಕ್ತರು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೆರವಣಿಗೆ ಸಾಗುವ ಮಾರ್ಗದೂದಕ್ಕೂ ಮಹಿಳೆ-ಮಕ್ಕಳು ಬಿಂದಿಗೆಯಲ್ಲಿ ನೀರು ತಂದು ರಸ್ತೆಯನ್ನು ಮಡಿಗೊಳಿಸಿದರು. ಭಕ್ತರು, ಉಧೋ, ಉಧೋ ಎಂಬ ಜಯಘೋಷ ಮೊಳಗಿಸಿದರು.
ಈ ಸಂದರ್ಭದಲ್ಲಿ ತುನಕೊಡ ಹೊತ್ತ ಮೆರವಣಿಗೆ ಸಾಗುವ ಎದುರು ಮುಖವಾಗಿ ಬರುವ ವಾಹನಗಳನ್ನು ಪೊಲೀಸರು, ತಡೆದು ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದ್ದರು. ಮೆರವಣಿಗೆ ಸಾಗಿದ ಬಳಿಕ ವಾಹನಗಳು ಮುಂದೆ ಸಾಗುತ್ತಿದ್ದವು. ರಸ್ತೆ ಎರಡು ಮಗ್ಗಲುಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತು, ದೇವಿ ದರ್ಶನ ಪಡೆದರು. ಈ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.