ಮಳೆನೀರಿನ ಮಹತ್ವ ಜ್ಞಾನಭಾರತಿ ಶಾಲಾಮಕ್ಕಳಿಗೆ ಜಲತಜ್ಞ ದೇವರಾಜ ರೆಡ್ಡಿ ಪ್ರಾತ್ಯಕ್ಷಿಕೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 23 :- ಅಂತರ್ಜಲ ಕುಸಿತದಿಂದ ನಿಂತಿರುವ ಬೋರ್ವೆಲ್ ಮತ್ತೆ ರೀಚಾರ್ಜ್ ಮಾಡುವುದು ಹೇಗೆ, ಮನೆಯ ಮಾಳಿಗೆಯಿಂದ ಸುಮ್ಮನೆ ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸುವ  ಮೂಲಕ ಶುದ್ಧ ಕುಡಿಯುವ ನೀರು ತಯಾರಿಸುವ ವಿಧಾನ ಕುರಿತಂತೆ ಪಟ್ಟಣದ ಜ್ಞಾನಭಾರತಿ ವಿದ್ಯಾಸಂಸ್ಥೆ ಮಕ್ಕಳಿಗೆ ರಾಜ್ಯಪ್ರಶಸ್ತಿ ಪುರಸ್ಕೃತ ಹಾಗೂ ನಾಡಿನ ಹೆಸರಾಂತ ಜಲತಜ್ಞ ದೇವರಾಜರೆಡ್ಡಿ ಅವರು ಪ್ರಾತ್ಯಕ್ಷಿಕೆ ಮೂಲಕ ಮಳೆನೀರಿನ ಸಂಗ್ರಹದ ಮಹತ್ವವನ್ನು ಇಂದು ತಿಳಿಸಿದರು.
ಪಟ್ಟಣದ ಜ್ಞಾನಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಇಂದು ಬೆಳಿಗ್ಗೆ ಮಕ್ಕಳಿಗೆ ಮಳೆನೀರಿನ ಮಹತ್ವ ತಿಳಿಸುವ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಅಂತರ್ಜಲ ಕುಸಿತದಿಂದ ಬೋರ್ವೆಲ್ ಫೇಲಾಗದಂತೆ ರಿಚಾರ್ಜ್ ಆಗುವ ಕ್ರಮವನ್ನು ಹೇಗೆ ಮಾಡಬೇಕು ಎಂದು ಶಾಲಾವಾರಣದಲ್ಲಿಯೇ ಇರುವ ಬೋರ್ವೆಲ್ ಜಾಗದ ಬಳಿ  ಸಂಸ್ಥೆಯ ಶಾಲಾಮಕ್ಕಳಿಗೆ ಬೋರ್ವೆಲ್ ರಿಚಾರ್ಜ್ಗೆ ಬಳಸುವ ವಸ್ತುಗಳು ಹಾಗೂ ಅದರ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.
ನಾವು ವಾಸಿಸುವ 30*40 ಸೈಟಿನ ಮನೆಯಲ್ಲಿಯೇ ಮಾಳಿಗೆಯಿಂದ ಸುಮ್ಮನೆ ಹರಿದು ಅಪವ್ಯಯವಾಗುವ ನೀರನ್ನು ವೇಸ್ಟ್ ಮಾಡುವ ಬದಲು ಅದೇ ನೀರನ್ನು ಸಂಗ್ರಹಿಸುವ ತೊಟ್ಟಿಯನ್ನು ಮಾಡಿ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಶುದ್ಧ ನೀರನ್ನು ತಯಾರಿಸಿಕೊಂಡಲ್ಲಿ  ಫ್ಲೋರೈಡ್ ಅಂಶದ ನೀರನ್ನು ಕುಡಿದು ಮೂಳೆಸವೆತ, ಹಲ್ಲುಗಳು ಕರೆಗಟ್ಟುವುದನ್ನು ತಪ್ಪಿಸಿ ಉತ್ತಮ ಆರೋಗ್ಯಕ್ಕೆ ವರ್ಷಾಪೂರ ಶುದ್ಧವಾದ ನಲವತ್ತು ಸಾವಿರಕ್ಕೂ ಹೆಚ್ಚು ಲೀಟರ್ ನೀರು ಸಂಗ್ರಹಿಸಬಹುದಾಗಿದೆ ಇಂದು ಈ ನೀರಿನ ಸಂಗ್ರಹಮಾಡಿದಲ್ಲಿ ಮುಂದಾಗುವ  ನೀರಿನ ಸಮಸ್ಯೆಗೆ ಮುಂಚಿತವಾಗಿಯೇ ಪರಿಹಾರ ಕಂಡುಕೊಳ್ಳುವಲ್ಲಿ ಪ್ರತಿಯೊಬ್ಬರೂ ಮಳೆನೀರು ಸಂಗ್ರಹದ ಮಹತ್ವವನ್ನು ಅರಿತುಕೊಳ್ಳುವಂತೆ ಜನತೆ ಪ್ರತಿಮನೆಗೊಂಡು ಮಳೆನೀರು ಸಂಗ್ರಹದ ಟ್ಯಾಂಕ ನಿರ್ಮಿಸಿಕೊಳ್ಳಲು ಮುಂದಾಗುವಂತೆ ಜಲತಜ್ಞ ದೇವರಾಜರೆಡ್ಡಿ ಕರೆನೀಡಿದರು.
ಈ ಸಂದರ್ಭದಲ್ಲಿ ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಾನಾಮಡುಗು ತಿಪ್ಪೇಸ್ವಾಮಿ,  ಕಾರ್ಯದರ್ಶಿ ಡಾ.ರವಿಕುಮಾರ, ಪಟ್ಟಣದ ಶ್ರೀನಿವಾಸ ಕ್ಲಿನಿಕ್ ನ ವೈದ್ಯ ಡಾ. ಗುರುರಾಜ, ಜ್ಞಾನಭಾರತಿ ಶಾಲೆಯ ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿ ಸಮೂಹ  ಸೇರಿದಂತೆ ಇತರಿದ್ದರು.

Attachments area