ಮಳೆಗೆ ಹಾಳಾಯ್ತು ಬೆಳೆ: ಸಂಕಷ್ಟದಲ್ಲಿ ರೈತ

ಮಂಜುನಾಥ ಕವಳಿ
ಧಾರವಾಡ,ಜು21 : ಜಿಲ್ಲೆಯಾದ್ಯಂತ ಸತತವಾಗಿ ಸುರಿದ ಮಳೆಯಿಂದ ರೈತ ಬೆಳೆದ ಬೆಳೆಗಳಿಗೆ ಸುಡುರೋಗ ಹಾಗೂ ಬೆಂಕಿ ರೋಗ ತಗುಲಿ ಸಂಪೂರ್ಣ ಹಾಳಾಗಿದ್ದು ರೈತರು ಸಂಕಷ್ಟ ಎದುರಿಸುವಂತಾಗಿದೆ.
ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಧೋ ಎಂದು ಮಳೆ ಅಬ್ಬರ ಜೋರಾಗಿತ್ತು. ಮಳೆಯಿಂದ ರೈತರ ಬೆಳೆದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ಹಲವಾರು ರೋಗಕ್ಕೆ ತುತ್ತಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ರೈತರು ಹೊಲಗಳಲ್ಲಿ ಬೆಳೆದ ಬೇಳೆಯನ್ನು ನೋಡುತ್ತಾ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಧಾರವಾಡ ತಾಲೂಕಿನಾದ್ಯಂತ ಪ್ರಮುಖವಾಗಿ ಸೋಯಾಬೀನ್, ಶೇಂಗಾ, ಹೆಸರು, ಗೋವಿನಜೋಳ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಾರೆ. ತಗ್ಗು ಪ್ರದೇಶಗಳಲ್ಲಿ ಇರುವ ಹೋಲಗಳಲ್ಲಿ ನೀರು ನಿಂತು ರೈತರ ಬೆಳೆಗಳಿಗೆ ರೋಗ ತಗುಲಿ ಆತಂಕ ಹೆಚ್ಚಿಸಿದೆ. ಅದರಲ್ಲೂ ಕೆಲವು ಬೆಳೆಗಳು ಸಂಪೂರ್ಣ ಹಾಳಾಗಿದೆ.
ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರು ತಮ್ಮ ಅಳಲು ತೋಡಿಕೊಂಡಿದ್ದು ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ಇದೀಗ ಅಧಿಕ ಮಳೆಯಿಂದ ಹಾಳಾಗಿರುವುದು ನಮ್ಮ ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ಅಳಲು ರೈತ ಫಕ್ಕಿರಪ್ಪ ತೋಡಿಕೊಂಡಿದ್ದಾರೆ.
ಅತಿಯಾಗಿ ಸುರಿದ ಮಳೆಯಿಂದ ಭೂಮಿ ಜೊಂಡು ಹಿಡಿದು ಗೋವಿನ ಜೋಳದ ಬೆಳೆ ಸಂಪೂರ್ಣ ಹಾಳಾಗಿದ್ದು ರೈತರು ಇದೀಗ ಸಂಕಷ್ಟ ಎದುರಿಸುವಂತಾಗಿದೆ.