ಮಳೆಗೆ ಮೈಸೂರಲ್ಲಿ ಜೀವನ ಅಸ್ಥವಸ್ಥ

ಸಂಜೆವಾಣಿ ನ್ಯೂಸ್
ಮೈಸೂರು.ಜೂ.03:- ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ಸಾಂಸ್ಕೃತಿಕ ನಗರಿಯಲ್ಲಿ ಮಳೆ ಅರ್ಭಟ ಶುರು ಮಾಡಿದೆ. ಶನಿವಾರ ತಡ ರಾತ್ರಿವರೆಗೂ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ಥವ್ಯಸ್ಥಗೊಂಡಿತ್ತು.
ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಳೆದ ಕೆಲ ದಿನಗಳಿಂದ ಮಳೆ ಕೊಂಚ ವಿರಾಮ ಪಡೆದುಕೊಂಡಿತ್ತು. ಆದರೆ ಶನಿವಾರ ಯಾವುದೇ ಮುನ್ಸೂಚನೆ ನೀಡದೇ ಮಳೆರಾಯ ಅಬ್ಬರಿಸಿದ್ದಾನೆ.
ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಎರಡು ಗಂಟೆಯ ನಂತರ ಶುರುವಾದ ಮಳೆ ತಡರಾತ್ರಿಯವರೆಗೂ ಬಿಟ್ಟು ಬಿಡದಂತೆ ಸುರಿಯಿತು. ನಗರದ ಹೊರ ವಲಯದಲ್ಲಿ ಮಧ್ಯಾಹ್ನ ಧಾರಾಕಾರ ಮಳೆ ಸುರಿದ ಪರಿಣಾಮ ಅಗ್ರಹಾರ, ಕನಕಗಿರಿ, ಚಾಮರಾಜ ಜೋಡಿ ರಸ್ತೆ, ನಗರ ಬಸ್ ನಿಲ್ದಾಣ, ವಿಜಯನಗರ, ಸರಸ್ವತಿಪುರಂ, ಕುವೆಂಪು ನಗರ ಸೇರಿದಂತೆ ವಿವಿಧ ಕಡೆ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಶೇಖರಣೆಯಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಕಣ್ಣಿದ್ದು ಕುರುಡಾದ ಚೆಸ್ಕಾಂ ಸಿಬ್ಬಂದಿಗಳು: ಶನಿವಾರ ಸುರಿದ ಮಳೆಗೆ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜು ರಸ್ತೆಯಲ್ಲಿ ಮರ ರಸ್ತೆ ಬಿದ್ದಿತ್ತು. ಇದನ್ನು ನಗರಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದರು. ಆದರೆ, ಕಳೆದ 15 ದಿನಗಳ ಹಿಂದೆ ಸುರಿದ ಮಳೆಯಿಂದ ಮಾನಸ ಗಂಗೋತ್ರಿಯ ಟೋಲ್ ಗೇಟ್‍ನಿಂದ ಪಾಡುವಾರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಒಣ ಮರ ಬಿದ್ದಿದ್ದರೂ ತೆರವುಗೊಳಿಸಿದೇ ಅಧಿಕಾರಿಗಳು
ನಿರ್ಲಕ್ಷ?ಯ ತೋರಿದ್ದಾರೆ. ವಾಹನ ಸವಾರರ ಮೇಲೆ ಬಿದ್ದು ಅನಾಹುತ ಸಂಭವಿಸವುದಕ್ಕೂ ಮುನ್ನಾ ತೆರವು ಮಾಡುತ್ತಾರಾ ಅಥವಾ
ಅನಾಹುತ ಸಂಭವಿಸಿದ ಬಳಿಕ ತೆರವು ಮಾಡುತ್ತಾರಾ. ಕೂಡಲೇ ಎಚ್ಚೆತ್ತುಕೊಂಡು ಒಣಗಿ ಬಿದ್ದಿರುವ ಮರ ತೆರವು ಮಾಡಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಭಾನುವಾರ ಅಲ್ಲಲ್ಲಿ ಮಳೆ: ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆ ಕಳೆದ ಎರಡು ದಿನಗಳಿಂದ ಮತ್ತೆ ಪುನಾರಂಭವಾಗಿದ್ದು, ಭಾನುವಾರ ನಗರದ ಹಲವಡೆ ಧಾರಕಾರವಾಗಿ ಮಳೆ ಸುರಿದಿದೆ. ಮುಂಜಾನೆ ಮೋಡ ಕವಿದ ವಾತಾವರಣವಿದ್ದರೂ ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚಾಗಿತ್ತು. ಸಂಜೆ 4ರ ಸುಮಾರಿಗೆ ಜೋರಾಗಿ ಮಳೆ ಆರಂಭವಾಗಿ 15 ನಿಮಿಷಗಳ ಕಾಲ ಧಾರಕಾರವಾಗಿ ಸುರಿಯಿತು. ನಗರದ ಶ್ರೀರಾಂಪುರ, ಚಾಮುಂಡಿಪುರಂ, ಅಶೋಕಪುರಂ ಮಳೆ ಸುರಿದಿದೆ. ಮಳೆ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ಹೂಳೆತ್ತಿರುವುದಲ್ಲದೇ ರಸ್ತೆ ಬದಿಯ ಮರದ ರೆಂಬೆ-ಕೊಂಬೆಗಳನ್ನು ಕತ್ತರಿಸುವ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ.