ಮಳೆಗೆ ಮುಳುಗುತ್ತಿದೆ ವಸತಿ ಶಾಲೆ

ಮಧುಗಿರಿ, ಆ. ೧- ಮಳೆ ಬಂತೆಂದರೆ ಮುಳುಗುವ ವಸತಿ ಶಾಲೆಯಾಗಿ ಶಾಲಾ ಆವರಣ ಜಲಾವೃತಗೊಂಡಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳ ಮತ್ತು ವಸತಿ ಶಾಲೆಯ ಶಿಕ್ಷಕರ ಪಾಡು ಹೇಳತೀರದಾಗಿದೆ.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಸೂದೇನಹಳ್ಳಿ ಗ್ರಾಮದಲ್ಲಿರುವ ಡಾ. ಅಂಬೇಡ್ಕರ್ ವಸತಿ ಶಾಲೆಯ ಪ್ರಸ್ತುತ ಸ್ಥಿತಿ ಇದಾಗಿದೆ.
ಈ ಶಾಲೆಯನ್ನು ಸಚಿವ ಶ್ರೀರಾಮುಲು ಲೋಕಾರ್ಪಣೆಗೊಳಿಸಿದ್ದರು. ಈ ಶಾಲೆಗೆ ಸರಿಯಾದ ರಸ್ತೆಯಿಲ್ಲ ಮಾರ್ಗಸೂಚಿಯಿಲ್ಲ. ಈ ಶಾಲೆಯನ್ನು ಹೊಸಬರು ಹುಡುಕಿಕೊಂಡು ಬಂದರೆ ತಕ್ಷಣ ಗೋಚರವಾಗದೆ ಮಾರ್ಗವನ್ನು ತಪ್ಪಿ ಬೇರೆಡೆಗೆ ಹೋಗುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ಎಲ್ಲಿಯೂ ಶಾಲೆಯ ಇರುವುದರ ಬಗ್ಗೆ ನಾಮಫಲಕವೂ ಸಹ ಹಾಕಿಲ್ಲ.
ಮಾಜಿ ಶಾಸಕ ಕೆ. ಎನ್. ರಾಜಣ್ಣ ನವರ ದೂರದೃಷ್ಟಿಯ ಫಲದಿಂದಾಗಿ ವಿಶಾಲವಾದ ಸ್ಥಳದಲ್ಲಿ ಈ ಶಾಲೆ ತಲೆ ಎತ್ತಿದೆ. ಈ ಹಿಂದೆ ಸೂದೇನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ವಾಗ್ದಾನಗಳನ್ನು ಯಾವೂದೊಂದು ಸರಿಯಾಗಿ ಈಡೇರದಿರುವುದು ಗ್ರಾಮಸ್ಥರ ಕೊರಗಾಗಿಯೇ ಉಳಿದಿದೆ.
ಈ ಶಾಲೆಯಲ್ಲಿ ವ್ಯಾಸಂಗ ಮಾಡಲು ತುಮಕೂರು ಜಿಲ್ಲೆಯ ನಾನಾ ಕಡೆಗಳಿಂದ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಮಳೆ ಬಂದ ಪರಿಣಾಮ ಸಂಪೂರ್ಣ ಜಲಾವೃತಗೊಂಡು ಈ ಶಾಲೆಯಲ್ಲಿ ಹಾದು ಹೋಗುವ ೨-೩ ಹಳ್ಳಗಳಿಂದಾಗಿ ಸಂಪೂರ್ಣ ಮುಳುಗಡೆ ಪ್ರದೇಶವಾಗಿ ಪರಿವರ್ತನೆಗೊಂಡಿದೆ.
ಪ್ರಾಂಶುಪಾಲ ರಾಜಶೇಖರ್ ಈ ಬಗ್ಗೆ ಪ್ರತಿಕ್ರಿಯಿಸಿ, ಕಳೆದೆರಡು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸಿಬ್ಬಂದಿಯವರು ಜೆಸಿಬಿ ಮೂಲಕ ನೀರನ್ನು ತೆರವುಗೊಳಿಸಿದ್ದಾರೆ. ಈ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಬೆಂಗಳೂರಿನಿಂದ ತಂಡವೊಂದು ಆಗಮಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವ ಡ್ರೈನೇಜ್ ನಿರ್ಮಿಸುವ ಧಕ್ಕೆ ಎಸ್ಟಿಮೇಟ್ ಮಾಡುತ್ತಾರೆ. ಶಾಲೆಗೆ ಕುಡಿಯುವ ನೀರೊದಗಿಸುವ ಟ್ಯಾಂಕ್ ನಲ್ಲಿ ಮಳೆ ನೀರು ಮಿಶ್ರಣವಾಗಿರುವುದರಿಂದ ಮತ್ತು ಮಲ ಮೂತ್ರ ಪಿಟ್ ಗಳಲ್ಲಿ ಮಳೆ ನೀರಿ ತುಂಬಿಕೊಂಡು ಅನೈರ್ಮಲ್ಯಗೊಂಡಿರುವ ಕಾರಣ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂದು ಉನ್ನತಾಧಿಕಾರಿಗಳ ಗಮನಕ್ಕೆ ತಂದಾಗ ಶಾಲೆಗೆ ರಜೆ ಘೋಷಿಸುವಂತೆ ತಿಳಿಸಿದರು. ಮಳೆ ನಿಂತ ನಂತರ ಸಂಪೂರ್ಣ ಸ್ವಚ್ಛತೆಯಾದ ನಂತರ ಶಾಲೆಯನ್ನು ಅರಂಭಿಸಲಾಗುವುದು ಎಂದು ಹೇಳಿದ್ದಾರೆ.
ವಿದ್ಯುತ್ ಕಂಬಗಳು ಹಾದು ಹೋಗಿದ್ದರೂ ಕೂಡ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.