ಮಳೆಗೆ ಮನೆ ಬಿದ್ದು ಮೂರು ಕುರಿ ಸಾವು, ಸಿಡಿಲಿಗೆ ಒಂದು ಆಕಳು, ಎರಡು ಎಮ್ಮೆ ಬಲಿ

ಬಸವಕಲ್ಯಾಣ:ಎ.9: ಬೇಸಿಗೆಯ ಬಿಸಿಲು ಆರಂಭವಾಗಿದೆ. ಇದರ ಮಧ್ಯೆ ಶುಕ್ರವಾರ ಬೆಳಿಗ್ಗೆ ನಗರ ಪ್ರದೇಶ ಸೇರಿದಂತೆ ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಭೂಮಿ ತಂಪಾಗಿದೆ. ಅಲ್ಲದೆ ಮಳೆಯಿಂದ ಕೆಲ ಅವಾಂತರಗಳು ಸಂಭವಿಸಿವೆ. ಕುರಿ, ಜಾನುವಾರುಗಳು ಸಿಡಿಲೆಗೆ ಬಲಿಯಾಗಿವೆ. ಶುಕ್ರವಾರ ಬೆಳಿಗ್ಗೆ ಸುರಿದ ಮಳೆಯಿಂದಾಗಿ ಈ ಘಟನೆಗಳು ಸಂಭವಿಸಿವೆ.

ಗುರುವಾರ ರಾತ್ರಿಯೂ ಸಹ ತಾಲೂಕಿನಲ್ಲಿ ಗುಡುಗು, ಸಿಡಿಲಿನ ಅಬ್ಬರದ ಮಧ್ಯೆ ಸ್ವಲ್ಪ ಮಳೆಯಾಗಿದೆ. ಶುಕ್ರವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದವು. ಮಳೆ ನಿಂತ ನಂತರ ರಸ್ತೆಯ ಮೇಲಿಂದ ನೀರು ಸರಾಗವಾಗಿ ಸಾಗಿವೆ. ಚರಂಡಿಗಳು ತುಂಬಿ, ತುಳುಕಿವೆ. ಅಲ್ಲದೆ ನಗರದ ಇಳಿಜಾರು ಪ್ರದೇಶಗಳಲ್ಲಿನ ಮನೆಗಳಲ್ಲಿ ನೀರು ಹೋಗಿ ನಿವಾಸಿಗಳು ಪರದಾಡಿದರು.

ಅಲ್ಲದೆ ತಾಲೂಕಿನ ಮೋರಖಂಡಿ ಗ್ರಾಮದ ಬಾಲಾಜಿ ಗಣಪತರಾವ ಅವರ ಮನೆ ಬಿದ್ದು ಮೂರು ಕುರಿಗಳು ಸಾವನಪ್ಪಿದರೆ, ಆಲಗೂಡ ಗ್ರಾಮದ ಬಂಡೆಪ್ಪಾ ಕರಬಸಪ್ಪ ಅವರ ಆಕಳು ಹಾಗೂ ರಾಜೇಶ್ವರ ಗ್ರಾಮದ ಹಣಮಂತರಾವ ಜ್ಞಾನಬಾ ಅವರಿಗೆ ಸೇರಿದ ಎಮ್ಮೆ ಮತ್ತು ಇಲ್ಲಾಳ ಗ್ರಾಮದ ಪ್ರೇಮಿಳಾಬಾಯಿ ಅವರ ಎಮ್ಮೆ ಸಿಡಿಲಿಗೆ ಬಲಿಯಾಗಿದ್ದು ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಂಚನಾಮೆ ನಡೆಸಿದ್ದಾರೆ.

ಅಲ್ಲದೆ ನಗರದ ಗಂಗಾ-ಮದೀನಾ ಕಾಲೋನಿಯ ಮನೆಯ ಮುಂಭಾಗದ ರಸ್ತೆಯ ಮೇಲೆ ಹರಿದ ನೀರು ಕೆಲ ಕಾಲ ಸಂಚಾರಕ್ಕೆ ವ್ಯತಯ ಉಂಟಾಯಿತು. ಮತ್ತು ನಗರದ ಗುಡ್ಡಾ ಕಾಲೋನಿಯ ನಿವಾಸಿಯೊಬ್ಬರ ಮನೆ ಕಂಪೌಂಡ ಕುಸಿದಿದೆ. ಒಟ್ಟಾರೆಯಾಗಿ ಮಳೆಯಿಂದಾಗಿ ಕುರಿ, ಜಾನುವಾರು ಸಾವನಪ್ಪಿದರೆ ಕೆಲವರ ಕಂಪೌಂಡ್ ಕುಸಿತು ಹಾನಿಯಾಗಿದೆ.