ಮಳೆಗೆ ಮನೆ ಗೋಡೆ ಕುಸಿತ

ತುರುವೇಕೆರೆ, ಆ. ೫- ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆರಾಯನ ಅಬ್ಬರಕ್ಕೆ ಬಾಣಸಂದ್ರ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ.
ತಾಲ್ಲೂಕಿನ ಬಾಣಸಂದ್ರ ಗ್ರಾಮದ ಅಜೀಜ್ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸೂರು ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಂತಾಗಿದೆ. ಮನೆಯಲ್ಲಿದ್ದ ಸಾಮಾನು ಸರಂಜಾಮುಗಳು ನುಜ್ಜುಗುಜ್ಜಾಗಿವೆ. ಮನೆಯ ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಭೇಟಿ ನೀಡಿ ಮನೆ ಕಳೆದುಕೊಂಡು ಸಂತ್ರಸ್ಥರಾಗಿರುವ ಅಜೀಜ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸರ್ಕಾರದ ಮಾನದಂಡದನ್ವಯ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.
ಮಳೆಯ ಆರ್ಭಟ ಹೆಚ್ಚಾಗಿ ವಾಸದ ಮನೆಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ವರದಿ ನೀಡುವಂತೆ ಅವರು ಸೂಚನೆ ನೀಡಿದರು.
ತಾಲ್ಲೂಕು ವ್ಯಾಪ್ತಿಯ ಅರಳೀಕೆರೆ ಬಳಿಯ ಹಳ್ಳದಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಮಾದಿಹಳ್ಳಿ ಮಾರ್ಗವಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಮಾದಿಹಳ್ಳಿ ಶಾಲೆಗೆ ತೆರಳುವ ಮಕ್ಕಳು ಶಿಕ್ಷಕರು ಪರದಾಡಬೇಕಾಯಿತು.
ತಾಲ್ಲೂಕಿನ ವ್ಯಾಪ್ತಿಯ ತೋಟ, ಹೊಲ ಗದ್ದೆಗಳು ಜಲಾವೃತಗೊಂಡಿವೆ. ಮಣೆಚಂಡೂರು ಗ್ರಾ.ಪಂ. ವ್ಯಾಫ್ತಿಯಲ್ಲಿ ೮ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇಟ್ಟಿಗೆಹಳ್ಳಿ, ಸೀಗೆಹಳ್ಳಿ ಮತ್ತಿತರ ಕಡೆಗಳಲ್ಲಿ ರಸ್ತೆಗಳು ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿವೆ.
ವರುಣನ ಅರ್ಭಟಕ್ಕೆ ಹಳೆ ಮನೆಗಳಲ್ಲಿ, ಗುಡಿಸಲುಗಳಲ್ಲಿ ವಾಸಿಸುವ ಜನತೆ ಜೀವ ಭಯದ ಆತಂಕ ಎದುರಿಸುವಂತಾಗಿದೆ.
ಗ್ರಾಮೀಣ ಪ್ರದೇಶದ ಮಣ್ಣಿನ ರಸ್ತೆಗಳು ಮಳೆಗೆ ತೋಯ್ದು ಕೆಸರು ಗದ್ದೆಗಳಾಗಿವೆ. ತಾಲ್ಲೂಕಿನ ಬಹುತೇಕ ಕೆರೆಕಟ್ಟೆಗಳು ಕೋಡಿ ಬಿದ್ದು ಮೈದುಂಬಿ ಹರಿಯುತ್ತಿವೆ.