ಮಳೆಗೆ ಬೆಳೆ ಹಾನಿ

ಲಕ್ಷ್ಮೇಶ್ವರ, ನ24: ತಾಲೂಕಿನಾದ್ಯಂತ ಕಳೆದ ವಾರ ಸುರಿದ ಮಳೆಗೆ ಹತ್ತಿ, ಮೆಣಸಿನಕಾಯಿ, ಶೇಂಗಾ, ಈರುಳ್ಳಿ ಹಾನಿಗೀಡಾಗಿದೆ. ಅದರ ಜೊತೆಗೆ ಇನ್ನುಳಿದ ಬೆಳೆಗಳು ಅಂದರೆ ಸೂರ್ಯಕಾಂತಿ ಬೆಳೆಯು ಮಳೆಗೆ ಧರೆಗೆ ಉರುಳಿದೆ.
ತಾಲೂಕಿನ ಬಡ್ನಿ ಗ್ರಾಮದ ರೈತ ಈರಬಸಪ್ಪ ಜಿಡ್ಡಿ ಎಂಬುವರ ಹೊಲದಲ್ಲಿ ಬೆಳೆದು ನಿಂತಿದ್ದ ಏಳು ಎಕರೆ ಪ್ರದೇಶದಲ್ಲಿನ ಸೂರ್ಯಕಾಂತಿ ಬೆಳೆ ನೆಲಕ್ಕುರುಳಿದ್ದು ರೈತನನ್ನು ಕಂಗಾಲಾಗಿಸಿದೆ.
ಸೂರ್ಯಕಾಂತಿ ಬೀಜ, ಗೊಬ್ಬರ, ಆಳು-ಕಳೆ ಮತ್ತಿತರ ವೆಚ್ಚ ಸೇರಿ ಸುಮಾರು ಐವತ್ತು ಸಾವಿರ ಖರ್ಚು ಮಾಡಿದ್ದು ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಆದರೆ ಎಲ್ಲೆಲ್ಲೂ ಜಮೀನುಗಳಲ್ಲಿ ನೀರು ತುಂಬಿಕೊಂಡು ಬೆಳೆ ಹಾಳಾಗುತ್ತಿದ್ದರೂ ರೈತರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಇದರಿಂದಾಗಿ ರೈತರು ಕಂಬದ ಪೆಟ್ಟು ಕಪಾಳದ ಪೆಟ್ಟು ಅನುಭವಿಸುವಂತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿ “ಏನು ಮಾಡೋದು ನಮ್ಮ ನಮ್ಮ ಹಣೆಬರಹ ಉತ್ತಿ-ಬತ್ತಿ ಬೆಳೆದ ಬೆಳೆ ನೀರುಪಾಲು ಅಕ್ಕೈತಿ ಭೂಮಿ ಪಾಲ್ ಆಕೈತಿ ಅಂತ ತಿಳ್ಕೊಂಡಿದ್ದಿಲ್ರಿ”, ಎಂದು ಹತಾಶೆಯಿಂದ ನುಡಿದರು.