ಮಳೆಗೆ ಬೆಳೆಹಾನಿ: ನೆರವಿಗೆ ಒತ್ತಾಯ

ಅಣ್ಣಿಗೇರಿ, ಆ 5: ಪಟ್ಟಣದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರೈತರ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.
ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ ರಾತ್ರಿ 8-30 ರವರೆಗೆ ಸುರಿದ ಮಳೆಯಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹೆಸರು, ಹತ್ತಿ, ಮೆಣಸಿನಕಾಯಿ, ಶೇಂಗಾ, ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಹೆಸರಿನ ಬೆಳೆ ಇನ್ನೇನು ಕಟಾವಿಗೆ ಬಂದ ಸಂದರ್ಭದಲ್ಲಿ ಹಾನಿಯಾಗಿರುವುದು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಂತಹ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿರುವುದು ರೈತನಿಗೆ ದಿಕ್ಕು ತೋಚದಂತಾಗಿದೆ. ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿ ಆಗಿದೆ.
ಇಷ್ಟೆಲ್ಲಾ ಆದರೂ ಕೃಷಿ ಇಲಾಖೆ ಅಧಿಕಾರಿಗಳಾಗಲಿ ಸರ್ಕಾರವಾಗಲಿ ಯಾವುದೇ ರೀತಿಯಾಗಿ ಹಾನಿಯನ್ನು ವೀಕ್ಷಣೆ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಕೂಡಲೇ ರೈತರ ನೆರವಿಗೆ ಸ್ಪಂದಿಸಬೇಕೆಂದು ರೈತರು ಒತ್ತಾಯಿಸಿದರು. ಜಾನುವಾರುಗಳಿಗೆ ಸಂಗ್ರಹಿಸಿರುವ ಮೇವು ಕೂಡ ಸಂಪೂರ್ಣವಾಗಿ ಜಲಾವೃತವಾಗಿರುವುದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಜಾನುವಾರುಗಳ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿಗೆ ರೈತ ಸಿಲುಕಿದ್ದಾನೆ.