ಮಳೆಗೆ ಬೆಳೆಹಾನಿ ಡಿಸೆಂಬರ್ ವೇಳೆಗೆ ಪರಿಹಾರ

ಬೆಂಗಳೂರು, ಸೆ. ೧೬- ಬಹು ತಿಂಗಳ ಬೆಳೆಗಳನ್ನೊರತುಪಡಿಸಿ ಡಿಸೆಂಬರ್ ಅಂತ್ಯದ ವೇಳೆಗೆ ಮುಂಗಾರು ಹಂಗಾಮಿನ ಬೆಳೆ ಪರಿಹಾರ ಹಣವನ್ನು ರೈತರಿಗೆ ಜಮೆ ಮಾಡಲಾಗುವುದು ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಬೆಳೆ ನಷ್ಟದ ಕುರಿತು ಕೇಂದ್ರ ತಂಡ ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಅಲ್ಲಿಂದಲೂ ಕೂಡ ಪರಿಹಾರ ಸಿಗಲಿದೆ ಎಂದು ಹೇಳಿದರು.ಶಶಿಲ್ ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರಿಂದ ಬೆಳೆ ವಿಮೆಯ ಕಂತನ್ನು ಕಟ್ಟಿಸಿಕೊಳ್ಳುವಾಗ ಇರುವ ಧಾವಂತ ಪರಿಹಾರ ನೀಡುವಾಗಲೂ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಈ ಸಂಬzಂಧ ವಾರಕ್ಕೊಮ್ಮೆ ಅಧಿಕಾರಿಗಳ ಜತೆ ಸಭೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರತಿ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪನಿಗಳ ಅಧಿಕಾರಿಗಳು ಕಡ್ಡಾಯವಾಗಿರುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಆಗಸ್ಟ್ ಅಂತ್ಯದವರೆಗೆ ೩೨,೫೦೦ಕ್ಕೂ ಹೆಚ್ಚು ರೈತರಿಗೆ ೫೩೦ ಕೋಟಿ ರೂ. ಬೆಳೆ ಪರಿಹಾರವನ್ನು ನೀಡಲಾಗುತ್ತಿದೆ. ಇನ್ನುಳಿದ ಬೆಳೆ ಹಾನಿಗೂ ಡಿಸೆಂಬರ್ ಅಂತ್ಯದ ವೇಳೆಗೆ ಬೆಳೆ ಪರಿಹಾರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಬೆಳೆ ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ೭ ಲಕ್ಷಕ್ಕೂ ಅಧಿಕ ರೈತರು ಬೆಳೆ ವಿಮೆ ಪರಿಹಾರಕ್ಕಾಗಿ ನೋಂದಣಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.
೭ ಲಕ್ಷ ೬೧ ಸಾವಿರ ಹೆಕ್ಟರ್ ಪ್ರದೇಶದ ಬೆಳೆ ಹಾನಿ
ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ೭,೬೧,೪೩೮.೮೬ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಹಾನಿಯಾಗಿವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ವಿಧಾನ ಪರಿಷತ್‌ನಲ್ಲಿಂದು ತಿಳಿಸಿದ್ದಾರೆ.ಮಳೆಯಿಂದಾಗಿರುವ ಹಾನಿಯ ಕುರಿತು ಕೃಷಿ, ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದರು.ಅಬ್ದುಲ್ ಜಬ್ಬಾರ್ ಮತ್ತು ಟಿ.ಎ ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸವರು, ಈ ಪೈಕಿ ಹಾವೇರಿ ಜಿಲ್ಲೆಯಲ್ಲಿ ೮೯,೯೫೫.೮೫ ಹೆಕ್ಟೇರ್, ಚಿತ್ರದುರ್ಗದಲ್ಲಿ ೭೧,೧೫೮.೪೭ ಹೆಕ್ಟೇರ್, ಯಾದಗಿರಿ ೩೮,೭೭೭.೩೨ ಹೆಕ್ಟೇರ್, ಬೆಳಗಾವಿಯಲ್ಲಿ ೨೭,೩೪೦.೬೬ ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟಾರೆ ೭ ಲಕ್ಷ ೬೧ ಸಾವಿರಕ್ಕೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ ಎಂದು ಹೇಳಿದರು.
೧೧೬ ಕೋಟಿ ಸಬ್ಸಿಡಿ ಬಿಡುಗಡೆ
ರಾಜ್ಯದಲ್ಲಿ ಭಾರಿ ಮಳೆಯಿಂದ ಬೆಳೆ ಹಾನಿಯಾದ ೧ ಲಕ್ಷ ೪ ಸಾವಿರ ರೈತರಿಗೆ ೧೧೬.೩೮ ಕೋಟಿ ಇನ್ಪುಟ್ ಸಬ್ಸಿಡಿಯನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದರು.ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಮಳೆಯಾಶ್ರಿತ ಪ್ರದೇಶಗಳಲ್ಲಿ ಪರತಿ ಹೆಕ್ಟೇರ್‌ಗೆ ನೀಡುವ ಮೊತ್ತವನ್ನು ೬,೮೦೦ ರೂ.ನಿಂದ ೧೩.೬೦೦ ರೂ. ಹಾಗೂ ನೀರಾವರಿ ಪ್ರದೇಶದಲ್ಲಿ ನಿಗದಿಪಡಿಸಿದ್ದ ೧೩,೫೦೦ ರೂ.ನಿಂದ ೨೫ ಸಾವಿರ ರೂ.ಗೆ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ನೀಡುವ ಪರಿಹಾರ ಮೊತ್ತವನ್ನು ಪ್ರತಿ ಹೆಕ್ಟೇರ್‌ಗೆ ೧೮ ಸಾವಿರ ರೂ.ನಿಂದ ೨೮ ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಆರಂಭಿಸಿರುವ ರೈತ ವಿದ್ಯಾನಿಧಿ ಯೋಜನೆಯಡಿ ಈವರೆಗೆ ೧೦,೦,೭೨೮ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿವೇತನ ನೀಡಲಾಗಿದೆ ಎಂದು ಹೇಳಿದರು.