
ಬೆಂಗಳೂರು, ಮೇ.೨೧- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಗಾಳಿ ಸಹಿತ ಸುರಿದ ಭಾರೀ ಮಳೆಗೆ ನಾನಾ ಕಡೆಗಳಲ್ಲಿ ನೂರಕ್ಕೂ ಮರಗಳು ಹಾಗೂ ರೆಂಬೆ ಕೊಂಬೆಗಳು ರಸ್ತೆಗೆ ಉರುಳಿಬಿದ್ದು, ಕಾರು, ಆಟೋ ಜಖಂಗೊಂಡಿವೆ. ಇದರಿಂದಾಗಿ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಹಲವೆಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡು ವಂತಾಯಿತು. ಜತೆಗೆ ಕೆಲವೆಡೆ ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿದ್ದರಿಂದ ವಾಹನಗಳಿಗೆ ಹಾನಿಯಾಗಿದ್ದರೂ, ಆತಂಕಕ್ಕೆ ಕಾರಣವಾಗಿತ್ತಾದರೂ, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.
ನಿನ್ನೆ ಸಂಜೆ ೫ಕ್ಕೆ ಸುಮಾರಿಗೆ ಮಳೆ ಆರಂಭವಾಯಿತು. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಕಬ್ಬನ್ ಪಾರ್ಕ್ ನಲ್ಲಿ ಐದಕ್ಕೂ ಅಧಿಕ ಮರ ಬುಡ ಸಮೇತ ಧರಗುರುಳಿವೆ. ಉಳಿದಂತೆ ೮೦ಕ್ಕೂ ಅಧಿಕ ಮರದ ರಂಬೆ ಕೊಂಬೆಗಳು ಮುರಿದು ಬಿದ್ದಿವೆ.
ಲಾಲ್‌ಬಾಗ್‌ನಲ್ಲಿಯೂ ನಾಲ್ಕಕ್ಕೂ ಅಧಿಕ ಮರ ಸಂಪೂರ್ಣವಾಗಿ ಧರೆಗುರುಳಿದರೆ, ೧೫ಕ್ಕೂ ಅಧಿಕ ಮರದ ರಂಬೆ ಕೊಂಬೆಗಳು ಬಿದ್ದಿವೆ. ಅಲ್ಲದೇ, ಕುಮಾರಸ್ವಾಮಿ ಲೇಔಟ್‌ನಲ್ಲಿ ಮೂರು ಮರ, ಪದ್ಮನಾಭನಗರ, ಯುಬಿ ಸಿಟಿ ಬಳಿ ತಲಾ ೨ ಮರ, ಬನಶಂಕರಿ ಪೊಲೀಸ್ ಠಾಣೆ ಬಳಿ, ಕಸ್ತೂರಿ ಬಾ ರಸ್ತೆ.
ಜೆಪಿ ನಗರ ೬ನೇ ಬ್ಲಾಕ್, ಬಿವಿಕೆ ಅಯ್ಯಂಗಾರ್ ರಸ್ತೆ, ಬಾಣಸವಾಡಿ ರಿಂಗ್ ರಸ್ತೆ, ಸುಬ್ಬಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ, ಕೆಜಿ ರಸ್ತೆ, ಹನುಮಂತನಗರ, ಬಳೇಪೇಟೆ, ಹೊಸಕೆರೆ ಹಳ್ಳಿ, ಶಾಂತಿನಗರ, ಕ್ವೀನ್ಸ್ ರಸ್ತೆ ಸೇರಿದಂತೆ ಒಟ್ಟಾರೆ ನಗರದಲ್ಲಿ ೧೭೫ಕ್ಕೂ ಅಧಿಕ ಮರ ಹಾಗೂ ಮರದ ರಂಬೆ ಕೊಂಬೆಗಳು ಬಿದ್ದಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಬಿಬಿಎಂಪಿ ಈಗಲೇ ಎಚ್ಚೆತ್ತುಕೊಂಡು ಮಳೆ ಹಾನಿ ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಇದೆ ರೀತಿಯ ಮಳೆ ಮುಂದುವರಿದರೆ ಪ್ರವಾಹ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ.
ಇನ್ನೂ ನಾಲ್ಕು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹೆದ್ದಾರಿಯಲ್ಲಿ ನೀರು…!
ರಾಮನಗರದಲ್ಲೂ ಸತತ ಒಂದು ಗಂಟೆ ಕಾಲ ಮಳೆಯಾಗಿದ್ದು, ಪರಿಣಾಮ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಹೆದ್ದಾರಿಯಿಂದ ಸರಾಗವಾಗಿ ನೀರು ಹೊರ ಹೋಗದ ಕಾರಣ ಮೊದಲ ೨೦ ನಿಮಿಷ ವಾಹನ ಸವಾರರ ಪರದಾಟ ನಡೆಸಿದರು. ನಂತರ ನಿಧಾನವಾಗಿ ಮಳೆ ನೀರು ಹೊರ ಹೋಯಿತು. ರಾಮನಗರ ತಾಲೂಕಿನ ಮಾಯಾಗಾನಹಳ್ಳಿ ಗ್ರಾಮದ ಬಳಿ ಅವಾಂತರ ನಡೆದಿದೆ.