ಮಳೆಗೆ ಧರೆಗುರುಳಿದ ಮರಗಳು

pramod layout bengaluru

ಬೆಂಗಳೂರು, ಏ.೨೪-ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರಿ ಗಾಳಿ, ಗುಡುಗು-ಮಿಂಚು ಸಹಿತ ಮಳೆ ಸುರಿದಿದ್ದರಿಂದ ರಾಜಧಾನಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಅಲ್ಲಲ್ಲಿ ಮರದ ಕೊಂಬೆಗಳು ಮುರಿದು ಬಿದ್ದಿವೆ.
ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಪಶ್ಚಿಮ ವಲಯದಲ್ಲಿ ಮೂರು, ಆರ್ ಆರ್ ನಗರ ವ್ಯಾಪ್ತಿಯಲ್ಲಿ ಎರಡು, ಯಲಹಂಕ ಒಂದು ಪೂರ್ವ ವಲಯದಲ್ಲಿ ಎರಡು ಸೇರಿದಂತೆ ಹತ್ತು ಅಧಿಕ ಮರಗಳು ನೆಲಕ್ಕೆ ಬಿದ್ದಿದೆ. ಇದರ ಪರಿಣಾಮ ಹಲವು ಕಡೆಗಳಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಆಯಿತು. ಈ ವೇಳೆ ಸ್ಥಳೀಯರು ಮುತುವರ್ಜಿ ವಹಿಸಿ ರಸ್ತೆಗೆ ಬಿದ್ದ ಮರದ ಕೊಂಬೆ ಪಕ್ಕಕ್ಕೆ ಸರಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಮತ್ತೊಂದೆಡೆ ನಗರದ ಹಲವು ಕೆಳ ಸೇತುವೆಯಲ್ಲಿ (ಅಂಡರ್‌ಪಾಸ್) ನೀರು ತುಂಬಿಕೊಂಡಿದ್ದರಿಂದ ರಸ್ತೆಯ ಸಂಪರ್ಕ ಕಡಿತಗೊಂಡು ಜನರಿಗೆ ತೀವ್ರ ತೊಂದರೆಯಾಯಿತು.
ಇಲ್ಲಿನ ಓಕಳಿಪುರಂ, ಬಾಪೂಜಿನಗರ, ಹೆಬ್ಬಾಳ, ನಾಗವಾರ, ಎಚ್ ಬಿಆರ್ ಸೇರಿದಂತೆ ನಾನಾ ಕಡೆಗಳಲ್ಲಿ ಕೆಳ ಸೇತುವೆಯಲ್ಲೂ ನೀರು ನಿಂತು ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.ಈ ಸಂಗತಿ ತಿಳಿದ ಸ್ಥಳೀಯರು ಬಿಬಿಎಂಪಿ ಸಹಾಯವಾಣಿಗೆ ದೂರುಗಳು ಸಲ್ಲಿಸಿದರು. ನಿಗಧಿತ ಸಮಯಕ್ಕೆ ಪರಿಹಾರ ದೊರೆತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಇಲ್ಲಿನ ಓಕಳಿಪುರಂ ರಸ್ತೆಯಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಬಾರದೆಂದು ಈ ಹಿಂದೆಯೇ ಮನವಿ ಮಾಡಿದ್ದೆವು. ಆದರೆ, ಅವರು ಸಾಧಕ ಬಾಧಕ ತಿಳಿಯದೆ ಮತ್ತು ಸ್ಥಳೀಯರ ಜತೆ ಚರ್ಚಿಸದೆ ಸೇತುವೆ ಮಂಜೂರು ಮಾಡಿದರು. ಇದರಿಂದ ಈಗ ಸ್ಥಳೀಯರು?ಮಳೆಗಾಲದಲ್ಲಿ ನರಕ ಅನುಭವಿಸುವಂತಾಗಿದೆ ಎಂದು ಶ್ರೀರಾಮಪುರ ನಿವಾಸಿಯೊಬ್ಬರು ದೂರಿದರು.
೪೩ ಮಿ.ಮೀ: ನಗರದಲ್ಲಿ ನಿನ್ನೆ ತಡರಾತ್ರಿ ೩೦ ನಿಮಿಷಗಳಲ್ಲಿ ೪೩ ಮಿ.ಮೀ. ನಷ್ಟು ಮಳೆ ಸುರಿದಿದೆ. ಐಎಂಡಿಯ ಸ್ವಯಂಚಾಲಿತ ಹವಾಮಾನ ಕೇಂದ್ರವು ಕೇವಲ ೧೫ ನಿಮಿಷಗಳಲ್ಲಿ ೩೧ ಮಿ.ಮೀ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ವರುಣನ ಅರ್ಭಟ ಹೆಚ್ಚಾಗಿತ್ತು. ರಾಜಧಾನಿಯಲ್ಲಿ ಸಂಜೆ ಮತ್ತು ತಡರಾತ್ರಿ ಸುರಿದ ಭಾರಿ ಮಳೆಗೆ ಗುಂಡಿಗಳಲ್ಲಿ ನೀರು ತುಂಬಿ ಸಂಪೂರ್ಣ ರಸ್ತೆ ಜಲವೃತಗೊಂಡಿತ್ತು.
ಇನ್ನು, ನಗರದ ಮೆಜೆಸ್ಟಿಕ್, ಶಿವಾನಂದ ವೃತ್ತ, ಮಲ್ಲೇಶ್ವರಂ, ಮೇಖ್ರಿ ವೃತ್ತ, ಯಶವಂತಪುರ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ಹೆಬ್ಬಾಳ, ವಿಜಯನಗರ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ವಿ.ನಾಗೇನಹಳ್ಳಿ, ಕೆ.ಜಿ.ಹಳ್ಳಿ, ಯಲಹಂಕ, ಎಚ್.ಗೊಲ್ಲಹಳ್ಳಿ, ವಡೇರಹಳ್ಳಿ, ದಯಾನಂದನಗರ, ಶಿವಕೋಟೆ, ಮಂಡೂರು, ಅಟ್ಟೂರು, ಮನೋರಾಯನಪಾಳ್ಯ, ಹೆಮ್ಮಿಗೆಪುರ, ನಾಗಪುರ, ವಿದ್ಯಾರಣ್ಯಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಿತು.
ರಾಜ್ಯದೆಲ್ಲೆಡೆ ಮಳೆ: ಬೆಂಗಳೂರು ಮಾತ್ರವಲ್ಲದೆ ಧಾರವಾಡ, ರಾಯಚೂರು, ಯಾದಗಿರಿ, ಬಾಗಲಕೋಟ, ಬೀದರ್, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಕರಾವಳಿ ಪ್ರದೇಶ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಶುಕ್ರವಾರ ತಡರಾತ್ರಿ ಧಾರಾಕಾರ ಮಳೆ ಸುರಿಯಿತು.
ಏ.೨೬ವರೆಗೂ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಆಗಾಗ್ಗೆ ಮೋಡ ಕವಿದ ವಾತಾವರಣ ಮತ್ತು ಜಿಟಿ ಜಿಟಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.