ಮಳೆಗೆ ದಶಪಥ ರಸ್ತೆ ಜಲಾವೃತ ಪ್ರಯಾಣಿಕರ ಆಕ್ರೋಶ

ರಾಮನಗರ,ಮಾ.೧೮:ನಿನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಾಮನಗರ ಸಮೀಪ ಸಂಘ ಬಸವನ ಗ್ರಾಮದ ಬಳಿ ಹೆದ್ದಾರಿಯಲ್ಲಿ ಮಳೆ ನೀರು ನಿಂತು ವಾಹನ ಸವಾರರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದಶಪಥ ಹೆದ್ದಾರಿ ಯೋಜನೆ ಉದ್ಘಾಟನೆಗೊಂಡ ಬೆನ್ನಲ್ಲೆ ಮಳೆ ರಾದ್ಧಂತವಾಗಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ನೀರು ನಿಂತಿರುವುದರಿಂದ ಕೆಲವು ವಾಹನಗಳು ಮಾರ್ಗಮಧ್ಯೆಯೇ ಕೆಟ್ಟು ನಿಂತಿವೆ. ಈ ಭಾಗದ ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಈ ಮಾರ್ಗದಲ್ಲಿ ದುಬಾರಿ ಟೋಲ್ ವಸೂಲಿ ಮಾಡಿ ಮಳೆ ನೀರು ಸಮರ್ಪಕವಾಗಿ ಹೊರ ಹೋಗಲು ಕ್ರಮಕೈಗೊಂಡಿಲ್ಲ ಎಂದು ಪ್ರಯಾಣಿಕರು ಹಿಡಿ ಶಾಪ ಹಾಕಿದ್ದಾರೆ. ಮಾರ್ಗಮಧ್ಯೆಯೇ ಕೆಟ್ಟು ನಿಂತಿರುವ ಕಾರೊಂದಕ್ಕೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಕಾರು ಜಖಂಗೊಂಡಿದೆ. ಆದರೆ, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ದಶಪಥ ಯೋಜನೆಯ ಲಾಭ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಭಾರಿ ಪೈಪೋಟಿಯೇ ನಡೆಸಿತ್ತು. ಆದರೆ, ಉದ್ಘಾಟನೆಗೊಂಡು ಒಂದು ವಾರದ ಅವಧಿಯಲ್ಲೆ ಮಳೆ ನೀರು ಸರಾಗವಾಗಿ ಹರಿಯದಿರುವುದು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. ಈಗ ಈ ಅವಾಂತರಕ್ಕೆ ರಾಜಕಾರಣಿಗಳೇ ಉತ್ತರ ನೀಡಬೇಕಾಗಿದೆ.