ಮಳೆಗೆ ಗ್ರಾಮ ಸಂಪೂರ್ಣ ಮುಳುಗಡೆ: ಊರು ತೊರೆದ 33 ಕುಟುಂಬಗಳು

ಗುಬ್ಬಿ, ಆ. ೩- ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಭಾರೀ ಮಳೆಗೆ ತುಂಬಿ ಹರಿದ ಗುಬ್ಬಿ ಅಮಾನಿಕೆರೆ ಕೋಡಿ ನೀರು ಎಲ್ಲೆಂದರಲ್ಲಿ ಹರಿದು ತೋಟಗಳ ಮೇಲೆ ಹಾದು ತೊರೆತೋಟ ಗ್ರಾಮವನ್ನೇ ಸಂಪೂರ್ಣ ಮುಳುಗಡೆ ಮಾಡಿದೆ.
ಕೃಷಿ ಅವಲಂಬಿತ ೩೩ ಕುಟುಂಬದ ಈ ತೊರೇತೋಟ ಗ್ರಾಮ ಅಡಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ಗುಬ್ಬಿ ಕೆರೆ ಕೋಡಿ ನೀರು ಹಾದು ಹೋಗುವ ದೊಡ್ಡ ತೊರೆ ಪಕ್ಕದ ಗ್ರಾಮಕ್ಕೆ ಕೋಡಿ ನೀರು ಮಾರಕವಾಗಿದೆ.
ಆಳೆತ್ತರದ ಮಟ್ಟಕ್ಕೆ ನೀರು ಹರಿದು ಎಲ್ಲಾ ತೋಟದ ಮನೆಗಳು ಜಲಾವೃತಗೊಂಡ ಹಿನ್ನೆಲೆ ಮನೆ ತೊರೆದ ಕೃಷಿಕರು ಪರದಾಡುವ ಸ್ಥಿತಿ ಬಂದಿದೆ. ಇರುವ ಒಂದು ದಾರಿಯನ್ನು ಕೋಡಿ ನೀರು ಮುಳುಗಿಸಿದೆ. ಮನೆಯ ಯಾವ ವಸ್ತುಗಳನ್ನು ಹೊರ ತರಲಾಗದೆ ಪರದಾಡಿದ ರೈತರ ದವಸ ಧಾನ್ಯ ನೀರು ಪಾಲಾಗಿದೆ. ಈ ದುಸ್ಥಿತಿ ಹೇಳಲಾಗದ ರೈತರು ಮಳೆಯ ಅಬ್ಬರಕ್ಕೆ ತತ್ತರಿಸಿದ್ದಾರೆ.
ವಿಷಯ ತಿಳಿದ ಗ್ರಾ.ಪಂ. ಪಿಡಿಒ ಶಿವಾನಂದ್, ಕಂದಾಯ ನಿರೀಕ್ಷಕ ರಮೇಶ್, ಗ್ರಾಮ ಲೆಕ್ಕಿಗ ಮಾದೇವಿ ಸ್ಥಳ ಪರಿಶೀಲನೆ ನಡೆಸಿದರು.
ವಾಸ್ತವ ಸ್ಥಿತಿ ಬಿಚ್ಚಿಟ್ಟ ಸಂತ್ರಸ್ತರು ಇರುವ ಒಂದೇ ರಸ್ತೆ ಮುಳುಗಡೆಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡುವಂತೆ ಮನವಿ ಮಾಡಿದರು. ಜತೆಗೆ ಅಡಗೂರು ಕೆರೆಯು ಅಪಾಯದಂಚಿನಲ್ಲಿದೆ. ತೂಬು ಒಡೆಯುವ ಹಂತದಲ್ಲಿದೆ. ಇನ್ನೊಂದು ದಿನ ಮಳೆ ಬಂದರೆ ಇಡೀ ಕೆರೆಯೇ ಹರಿದು ಈ ಗ್ರಾಮ ಕೊಚ್ಚಿ ಹೋಗಲಿದೆ. ಮನೆಗಳಿದ್ದ ಕುರುಹು ಸಿಗುವುದಿಲ್ಲ. ಈ ಬಗ್ಗೆ ಹಲವು ಬಾರಿ ಎಚ್ಚರಿಕೆಯನ್ನು ಹೇಮಾವತಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ತಿಳಿಸಲಾಗಿದೆ. ಸಚಿವ ಮಾಧುಸ್ವಾಮಿ ಅವರ ಗಮನಕ್ಕೂ ತಂದಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.
ನಂತರ ಮುಳುಗಡೆಯಾದ ಮನೆಗಳ ಮಾಲೀಕರ ವಿವರ ಪಡೆದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಕಳುಹಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ಸ್ಥಳದಲ್ಲಿದ್ದ ಅಧಿಕಾರಿಗಳು ನೀಡಿದ್ದಾರೆ.