ಮಳೆಗಾಳಿಗೆ ನೆಲಕ್ಕೆ ಬಿದ್ದ ತಂತಿವಿದ್ಯುತ್ ಆಘಾತದಿಂದ ತಾಯಿ,ಇಬ್ಬರ ಮಕ್ಕಳ ಸಾವು

ಚಿಂಚೋಳಿ,ಮಾ 19: ಪಟ್ಟಣದ ಧನಗರಗಲ್ಲಿಯಲ್ಲಿ ವಿದ್ಯುತ್ ಆಘಾತದಿಂದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಡರಾತ್ರಿ ಸಂಭವಿಸಿದೆ.
ತಾಯಿ ಝರಣಮ್ಮ ಅಂಬಣ್ಣ ಬಸಗೊಂಡ (44) ಮತ್ತು ಇಬ್ಬರು ಮಕ್ಕಳಾದ ಮಹೇಶ ತಂದೆ ಅಂಬಣ್ಣ (18 ), ಸುರೇಶ ಅಂಬಣ್ಣ (16) ಅವರು ವಿದ್ಯುತ್ ಅವಘಡದಲ್ಲಿ ಮೃತರಾದವರು. ಮೃತ ಝರಣಮ್ಮ ಪತಿ ಅಂಬಣ್ಣಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.
ಕಡಿದು ಬಿದ್ದ ವಿದ್ಯುತ್ ತಂತಿ:
ಶನಿವಾರ ರಾತ್ರಿ ಚಿಂಚೋಳಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಬಿರುಗಾಳಿಗೆ ಮನೆಯ ಮುಂದೆ ವಿದ್ಯುತ್ ಸರ್ವಿಸ್ ತಂತಿ ಕಡಿದು ನೀರಿನಲ್ಲಿ ಬಿದ್ದಿದೆ.ರಾತ್ರಿ ಒಂದು ಗಂಟೆ ಸುಮಾರಿಗೆ ದನಗಳಿಗೆ ಹಾಕುವ ಹೊಟ್ಟು ಮಳೆ ನೀರಿಗೆ ತೊಯ್ಯದಿರಲೆಂದು ಅದನ್ನು ತಾಡಪತ್ರಿಯಿಂದ ಮುಚ್ಚಲು ಹೋದಾಗ ವಿದ್ಯುತ್ ಸ್ಪರ್ಶವಾಗಿದೆ.ಏನಾಗಿದೆ ಎಂದು ಒಬ್ಬರ ಹಿಂದೆ ಒಬ್ಬರು ನೋಡಲು ಹೋದಾಗ ವಿದ್ಯುತ್ ಸ್ಪರ್ಶದಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಂದಾಪುರದ ತಾಲೂಕು ಆಸ್ಪತ್ರೆಗೆ ತರಲಾಗಿದೆ.ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುರ್ಘಟನೆಗೆ ಚಿಂಚೋಳಿ ಪಟ್ಟಣದ ಜನ ಆಘಾತಗೊಂಡಿದ್ದು, ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.
ಪರಿಹಾರಕ್ಕೆ ಆಗ್ರಹ:
ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂ ಪರಿಹಾರ ನೀಡುವಂತೆ ಮುಖಂಡರಾದ ಸಂಜೀವನ್ ಯಾಕಾಪುರ,ಅಜಿತ್ ಪಾಟೀಲ, ಅಬ್ದುಲ್ ಬಾಶೀದ್ ಅವರು ಆಗ್ರಹಿಸಿದ್ದಾರೆ.