ಮಳೆಗಾಲ ಮುಗಿದು ಚಳಿಗಾಲ ಕಳೆದರೂ ದುರಸ್ತಿಯಾಗದ ರಸ್ತೆ, ಗುಂಡಿ

ರಾಯಚೂರು.ಡಿ.೨೮- ಮಳೆಗಾಲ ಮುಗಿದು ಚಳಿಗಾಲವೂ ಮುಗಿಯುತ್ತಿದ್ದರೂ, ಗುಂಡಿ ಬಿದ್ದ ರಸ್ತೆಗಳಿಗೆ ಮಾತ್ರ ಕಾಯಕಲ್ಪವಿಲ್ಲದೇ ಜನ, ಯಥಾ ಜನಪ್ರತಿನಿಧಿಗಳು ತಥಾ ರಸ್ತೆ ದುಸ್ಥಿತಿ ಎನ್ನುವುದಕ್ಕೆ ಹೊಂದಿಕೊಂಡು ಧೂಳು ತುಂಬಿದ ರಸ್ತೆಗಳಲ್ಲಿ ಗುಂಡಿಗಳನ್ನು ದಾಟಿಕೊಂಡು ಸುರಕ್ಷಿತವಾಗಿ ಮನೆ ಸೇರಲು ನಿತ್ಯ ಕಸರತ್ತು ನಡೆಸುವುದು ಮುಂದುವರೆದಿದೆ.
ಈ ಹಿಂದೆ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ೧೦೦ ಕೋಟಿ ಬಗ್ಗೆ ಅನುದಾನ ಪ್ರಸ್ತಾಪ ಟೀಕೆ, ಟಿಪ್ಪಣಿಗಳು ಸಂದರ್ಭದಲ್ಲಿ ಮಳೆಗಾಲದ ನಂತರ ಗುಂಡಿ ತುಂಬುವ ಭರವಸೆಯಿಂದೆ ಒಂದಷ್ಟು ಕಾಲ ಕಷ್ಟ ಎಂದು ಸಿಸಿಕೊಂಡಿದವರು ಈಗ ಇದು ಶಾಶ್ವತ ಎನ್ನುವ ಅನುಭವದೊಂದಿಗೆ ಸಂಚಾರ ಮುಂದುವರೆಸಿದ್ದಾರೆ. ಜಿಲ್ಲಾ ಕೇಂದ್ರವಾದ ನಗರದಲ್ಲಿ ರಸ್ತೆ ನಿರ್ಮಾಣಕ್ಕೆ ಕಾಯಕಲ್ಪವೇ ಇಲ್ಲವೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಕೊರೊನಾ ಮಧ್ಯೆ ಜೀವನ ಕಳೆದ ಜನರಿಗೆ ಈಗ ಗುಂಡಿಗಳ ಸಂಚಾರದ ಮಧ್ಯೆ ದಿನ ಕಳೆಯುವಂತಾಗಿದೆ.
ಯಾವುದೇ ಮುಖ್ಯ ರಸ್ತೆಗೆ ಹೋದರೂ ಪರಿಸ್ಥಿತಿ ದಾರುಣ. ನೂರಾರು ಕೋಟಿ ಖರ್ಚು ವೆಚ್ಚದ ಲೆಕ್ಕ ತೋರುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗುಣಮಟ್ಟದ ರಸ್ತೆ ಎಲ್ಲಿದೆ ಎನ್ನುವುದು ಮಾತ್ರ ತೋರಿಸಲು ಸಾಧ್ಯವಿಲ್ಲದಂತಾಗಿದೆ. ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಕಾಮಗಾರಿಗಳಿಗೆ ಸಂಬಂಧಿಸಿ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಹಾಗೂ ಕೆಲವೇ ಬೆರಳಣಿಕೆಯ ಗುತ್ತೇದಾರರ ಮಾಫಿಯಾವೊಂದು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವ ಮೂಲಕ ಕಳಪೆ ಕಾಮಗಾರಿ ಅಥವಾ ನಕಲಿ ಬಿಲ್ ಎತ್ತುವಳಿ ಮೂಲಕ ಪ್ರತಿ ವರ್ಷ ಶ್ರೀಮಂತಿಕೆಯತ್ತ ಸಾಗುತ್ತಿದ್ದರೇ, ನಗರ ಮಾತ್ರ ಯಾವುದೇ ಅಭಿವೃದ್ಧಿಯಿಲ್ಲದೇ ಪಾಳು ಬಿಳುವಂತಾಗಿದೆ.
ನಗರದಲ್ಲಿ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳಿಗೆ ಸಂಬಂಧಿಸಿ, ಪ್ಯಾಕೇಜ್ ಕಾಮಗಾರಿ ಕರೆಯುವುದು, ಕೆಲವೇ ವ್ಯಕ್ತಿಗಳು ಗುತ್ತಿಗೆ ಪಡೆಯುವುದು ನಂತರ ಈ ಕಾಮಗಾರಿಯನ್ನು ಒಬ್ಬ ಗುತ್ತೇದಾರನ ಮೂಲಕ ಉಪ ಗುತ್ತಿಗೆ ವಹಿಸಿಕೊಡುವುದು ವಾಡಿಕೆಯಾಗಿದೆ. ಶೇ.೩೦ ರಿಂದ ೩೫ ಕಮಿಷನ್ ಆಧಾರದ ಮೇಲೆ ಉಪ ಗುತ್ತಿಗೆ ನೀಡುವ ಈ ವಿನೂತನ ಪದ್ಧತಿ ಗುತ್ತೇದಾರರಿಗೇನು ಲಾಭ ತಂದೊಡ್ಡಿದ್ದರೇ, ಜನ ಸಾಮಾನ್ಯರಿಗೆ ಮಾತ್ರ ನಿತ್ಯ ನೋವು ಎನ್ನುವ ಸತ್ಯದ ಮನವರಿಕೆ ಮಾಡಿದಂತಿದೆ.
ನಗರದಲ್ಲಿ ಕೆಲ ರಸ್ತೆ ಕಾಮಗಾರಿಗಳು ಆರಂಭಗೊಂಡು ರಸ್ತೆಯಲ್ಲಿಗಳಲ್ಲಿ ಕಂಕರ್ ಎಸೆದು, ತಿಂಗಳು ಕಳೆದರೂ, ಬಿಟಿ ಕಾರ್ಯ ನಡೆಯದೇ ಬಿದ್ದಿರುವ ಉದಾಹರಣೆಗಳಿದ್ದರೇ, ಇನ್ನೂ ಕೆಲವೆಡೆ ಕಾಮಗಾರಿ ಅರ್ಧಕ್ಕೆ ನಿಂತು ಹದಗೆಟ್ಟ ರಸ್ತೆಗಳಲ್ಲಿ ನಡೆದಾಡುವ ಅನಿವಾರ್ಯತೆಗೆ ಗುರಿಯಾಗಿದ್ದಾರೆ. ಚಂದ್ರಮೌಳೇಶ್ವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ನೇತಾಜಿ ವೃತ್ತದಿಂದ ವಲ್ಲಭಭಾಯ ಪಟೇಲ್ ವೃತ್ತದವರೆಗೂ ರಸ್ತೆ ಬಹುತೇಕ ಕಡೆ ಹದಗೆಟ್ಟಿದ್ದರಿಂದ ಇದನ್ನು ನೋಡುವ ಜನಪ್ರತಿನಿಧಿಗಳಿಗೆ ದುರಸ್ತಿ ಮಾಡಬೇಕೆಂಬ ಕನಿಷ್ಟ ಕಾಳಜಿ ಇಲ್ಲದಿರುವುದು ವಿಚಿತ್ರವಾಗಿದೆ.
ಸಂಸದರು, ಶಾಸಕರು, ಸ್ಥಳೀಯ ನಗರಸಭೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಹೀಗೆ ಸರ್ಕಾರದ ಹಂತದಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಜನರ ಪರ ಇದ್ದೇವೆಂದು ಹೇಳಿಕೊಳ್ಳುವುದು ಬಿಟ್ಟರೇ, ನಗರದ ಪರಿಸ್ಥಿತಿ ಮಾತ್ರ ಯಾವುದೇ ಸುಧಾರಣೆಯಾಗುತ್ತಿಲ್ಲ. ಆರಂಭಗೊಳ್ಳುವ ಕಾಮಗಾರಿಗಳ ಗುಣಮಟ್ಟ ಕಳಪೆಯಾಗುವುದು ಕಣ್ಣು ಮುಂದೆ ಇದ್ದರೂ, ನಗರ ಮತ್ತು ಲೋಕಸಭೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡದ ಅಸಹಾಯಕತೆಗೆ ಕಾರಣವಾದರೂ ಏನು ಎನ್ನುವುದೇ ಜನರ ಬಹುದೊಡ್ಡ ಪ್ರಶ್ನೆಯಾಗಿದೆ.
ಪ್ಯಾಕೇಜ್ ಮೂಲಕ ಎರಡು, ಮೂರು ಕೋಟಿ ರೂ. ಕಾಮಗಾರಿ ಪಡೆಯುವ ಗುತ್ತೇದಾರರು ನಂತರ ಇದನ್ನು ೩೦ ರಿಂದ ೩೫ ರ ಪರ್ಸೆಂಟೇಜ್‌ಗೆ ಮಾರಿಕೊಳ್ಳುತ್ತಿರುವುದು ಕಾನೂನು ಬಾಹೀರವಾಗಿದೆ. ಇಂತಹ ಕಾನೂನು ಬಾಹೀರ ಕೃತ್ಯ ನಡೆಯುತ್ತಿದ್ದರೂ, ಯಾಕೇ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ನಗರ ಸೇರಿದಂತೆ ಜಿಲ್ಲೆಯಲ್ಲಿ ಉಪ ಗುತ್ತಿಗೆ ನೀಡುವ ಬಹುದೊಡ್ಡ ವ್ಯವಹಾರ ಕಾನೂನು ಬದ್ಧವಾಗಿಯೇ ನಡೆಸಲಾಗುತ್ತಿದೆ. ಈ ವ್ಯವಹಾರವೇ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇಂತಹ ವ್ಯವಹಾರ ನಡೆದಷ್ಟು ಕಾಲ ನಗರ ಅಭಿವೃದ್ಧಿ ಇದೇ ರೀತಿ ಮುಂದುವರೆದು ಗುಂಡಿ ತುಂಬಿದ ರಸ್ತೆಗಳಲ್ಲಿಯೇ ಜನ ಸಂಚರಿಸುವುದು ಅನಿವಾರ್ಯವಾಗುವಂತೆ ಮಾಡಿದೆ.