ಮಳೆಗಾಲ ಪ್ರಾರಂಭವಾದ ಹಿನ್ನೆಲೆ:ಸಾರ್ವಜನಿಕರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ

ಕಲಬುರಗಿ.ಜು.04:ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ವಾಂತಿ ಬೇಧಿ ಪ್ರಕರಣಗಳು ಆಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಸಾರ್ವಜನಿಕರು ಈ ಕೆಳಕಂಡ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರು ನೀರನ್ನು ಕುದಿಸಿ ಆರಿಸಿ ಕುಡಿಯಬೇಕು. ಯಾವುದೆ ತಿಂಡಿ ಪದಾರ್ಥಗಳ ಮೇಲೆ ನೊಣಗಳು ಕೂಡದ ಹಾಗೆ ಮುಚ್ಚಿಡಬೇಕು. ಬಿಸಿಯಾದ ಆಹಾರ ಪದಾರ್ಥಗಳು ಸೇವನೆ ಮಾಡಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನೀರು ಶೇಖರಣೆ ಮಾಡುವ ವಸ್ತುಗಳು ಬಕೇಟ ಇತರೆ ಸ್ವಚ್ಛವಾಗಿ ತೊಳೆದು ನೀರನ್ನು ತುಂಬಿ ಇಡಬೇಕು.
ಮನೆಯಲ್ಲಿ ನಳದ ನೀರು ತೆಗೆದುಕೊಳ್ಳುವಾಗ ಪ್ರಾರಂಭದ ನೀರನ್ನು ಚೆಲ್ಲಿ ಮದ್ಯದ ನೀರು ಶೇಖರಣೆ ಮಾಡಬೇಕು. ಓವರ್ ಹೆಡ್ ಟ್ಯಾಂಕ್, ಗುಮ್ಮಿ, ಖೇಲು, ಸಂಪ್ ಚೆನ್ನಾಗಿ ತೊಳೆಯಲು ಸಂಬಂಧಪಟ್ಟವರಿಗೆ ತಿಳಿಸಬೇಕು. ಮನೆಯಲ್ಲಿ ಕೂಡಾ ಅನುಸರಿಸಬೇಕು.
ಬೋರವೆಲ್ ಸುತ್ತಮುತ್ತ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಚರಂಡಿಯಲ್ಲಿ ನೀರಿನ ಪೈಪ್ ಇದ್ದರೆ ಪೈಪ್ ಸೋರಿವಿಕೆ ಇದ್ದರೆ ಕೂಡಲೇ ಅದನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ತಿಳಿಸಬೇಕು. ಜಾನುವಾರುಗಳನ್ನು ಬೊರವೆಲ್ ಹತ್ತಿರ ಮೈತೊಳೆಯಬಾರದು. ಬೋರವೆಲ್ಲನ ನೀರು ಬಿಡುವ ವಾಲ್ ಹತ್ತಿರ ನೀರು ನಿಲ್ಲದಂತೆ ನೋಡಿಕೊಳಬೇಕು. ಹೋಟೆಲಗಳಲ್ಲಿ ಕುಡಿಯಲು ಬಿಸಿ ನೀರು ಕೊಡಲು ಹೇಳುವುದು ಹಾಗೂ ಬಿಸಿಯಾದ ಆಹಾರ ಸೇವನೆ ಮಾಡಬೇಕು.
ಸಾರ್ವಜನಿಕರು ಆರೋಗ್ಯ ಇಲಾಖೆಗೆ ಸಹಕರಿಸಿ ವಾಂತಿ ಭೇದಿ ಪ್ರಕರಣಗಳು ಆಗದಂತೆ ಎಚ್ಚರವಹಿಸಬೇಕೆಂದು ಅವರು ತಿಳಿಸಿದ್ದಾರೆ.