ಕಲಬುರಗಿ,ಸೆ.26:ಮಳೆಗಾಲ ಪ್ರಯುಕ್ತ ಡೆಂಗಿ ಜ್ವರ ಮತ್ತು ಚಿಕುಂಗುನ್ಯಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಈ ಕೆಳಕಂಡ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗಿ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಡೆಂಗಿ ರೋಗದ ಲಕ್ಷಣಗಳು: ಇದ್ದಕ್ಕಿದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈಕೈ ಮತ್ತು ಕೀಲು ನೋವು, ವಾಕರಿಕೆ ವಾಂತಿ ಇವುಗಳ ಜೊತೆಗೆ ತೀವ್ರ ಹೊಟ್ಟೆ ನೋವು, ಬಾಯಿ, ಮೂಗು ಮತ್ತು ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು, ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು / ರಕ್ತಸ್ರಾವದ ಗುರುತುಗಳು, ಕಪ್ಪು ಬಣ್ಣದ ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳಿಚಿದ ಚರ್ಮ, ಜ್ಞಾನ ತಪ್ಪುವುದು ಹಾಗೂ ರಕ್ತದ ಒತ್ತಡದ ಕುಸಿತ ಮತ್ತು ನಾಡಿ ಬಡಿತದ ಕುಸಿತ-ಇವು ಡೆಂಗಿ ರಕ್ತ ಸ್ರಾವ ಜ್ವರ ಮತ್ತು ಡೆಂಗಿ ಆಘಾತ ಜ್ವರದ ಲಕ್ಷಣಗಳಾಗಿವೆ.
ಡೆಂಗಿ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಆದರೆ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ ರೋಗ ಲಕ್ಷಣಗಳು ಉಲ್ಬಣಗೊಂಡು ಡೆಂಗಿ ರಕ್ತ ಸ್ರಾವ ಜ್ವರ (Dengue Hemorrhagic Fever - DHF ) ಹಾಗೂ ಡೆಂಗಿ ಆಘಾತ ಜ್ವರ ( Dengue Shock Syndrome – DSS) ದಿಂದ ಸಾವು ಸಂಭವಿಸಬಹುದು. ಆದ್ದರಿಂದ ಡೆಂಗಿ ಜ್ವರದ ಲಕ್ಷಣಗಳು ಕಂಡುಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.
ಚಿಕುಂಗುನ್ಯಾ: ಸೋಂಕಿತ ಈಡಿಸ್ ಜಾತಿಯ ಸೊಳ್ಳೆಗಳು ಕಚ್ಚುವುದರಿಂದ ಚಿಕುಂಗುನ್ಯ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದರೆ ಚಿಕೂನ್‍ಗುನ್ಯ ಮಾರಣಾಂತಿಕವಲ್ಲ.
ರೋಗದ ಲಕ್ಷಣಗಳು: ಇದ್ದಕ್ಕಿದ್ದಂತೆ ಜ್ವರ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಕಾಣಿಸಿಕೊಳ್ಳುವುದು. ಚಿಕುಂಗುನ್ಯ ಸೋಂಕಿಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಆದರೆ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದ್ದರಿಂದ, ಯಾವುದೇ ಜ್ವರವಿರಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಮಾಡಲಾಗುವುದು.
ಈಡಿಸ್ ಸೊಳೆಗಳ ಉತ್ಪತ್ತಿ ತಾಣಗಳು: ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳು ಮನೆಗಳಲ್ಲಿನ ನೀರು ಶೇಖರಣಾ ಸಂಗ್ರಾಹಕಗಳಾದ ಸಿಮೆಂಟ್ ತೊಟ್ಟಿಗಳು, ಬ್ಯಾರೆಲ್, ಡ್ರಂ, ಹೂ-ಕುಂಡಗಳ ಕೆಳಗಿನ ತಟ್ಟೆಗಳು, ಏರ್-ಕೂಲರ್, ರೆಫ್ರಿಜರೇಟರ್‍ನ De-frost Truy ಗಳಲ್ಲಿ ಹಾಗೂ ಮನೆಯ ಸುತ್ತ-ಮುತ್ತಲಿನ ಪರಿಸರದಲ್ಲಿ ಬಿಸಾಡಿದ ಒಡೆದ ಬಾಟಲಿ, ಟೈರು, ಪ್ಲಾಸ್ಟಿಕ್, ಗ್ಲಾಸ್, ಎಳೆನೀರಿನ ಚಿಪ್ಪು ಹಾಗೂ ಇತರ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾದ ಮಳೆಯ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತವೆ.
ಮಾಡಬೇಕಾದದ್ದು: ಮನೆಯಲ್ಲಿರುವ ಎಲ್ಲಾ ನೀರಿನ ಸಂಗ್ರಾಹಕಗಳು ಮತ್ತು ಮೇಲ್ಬಾವಣಿಯಲ್ಲಿರುವ ತೊಟ್ಟಿಯ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ನೀರನ್ನು ಮತ್ತೆ ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು. ಮನೆಯ ಸುತ್ತ-ಮುತ್ತಲಿನ ಪರಿಸರದಲ್ಲಿನ ಒಡೆದ ಬಾಟಲಿ, ಟೆನ್, ಟೈರು ಇತ್ಯಾದಿ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು. ಘನತ್ಯಾಜ್ಯ ವಸ್ತುಗಳನ್ನು ಬೋರಲಾಗಿಡುವುದು ಮತ್ತು ಶೀಘ್ರವಾಗಿ ಸೂಕ್ತ ವಿಲೇವಾರಿ ಮಾಡಬೇಕು. ಏರ್ ಕೂಲರ್‍ಗಳಲ್ಲಿ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಬದಲಾಯಿಸಬೇಕು. ಯಾವಾಗಲೂ ಮೈ ತುಂಬಾ ಬಟ್ಟೆ ಧರಿಸಬೇಕು. ಹಗಲು ಹೊತ್ತಿನಲ್ಲಿ ನಿದ್ರಿಸುವ / ವಿಶ್ರಾಂತಿ ಪಡೆಯುವ ಗರ್ಭಿಣಿಯರು, ಮಕ್ಕಳು ಮತ್ತು ವಯಸ್ಸಾದವರು ತಪ್ಪದೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಡೆಂಗಿ ಜ್ವರ ಪೀಡಿತರೂ ಸಹ ತಪ್ಪದೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಜ್ವರ ಪೀಡಿತರು ಸಾಕಷ್ಟು ದ್ರವರೂಪದ ಆಹಾರಗಳನ್ನು ಸೇವಿಸುವುದು ಹಾಗೂ ಅಗತ್ಯ ವಿಶ್ರಾಂತಿಯನ್ನು ಪಡೆಯಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು.
ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣ ಸಮೀಕ್ಷೆಗೆಂದು ಮನೆ ಭೇಟಿ ನೀಡುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಸ್ವಯಂಸೇವಕರು ನೀಡುವ ಸಲಹೆ – ಸೂಚನೆಗಳನ್ನು ಪಾಲಿಸಬೇಕು. ಇದಲ್ಲದೇ ಶಾಲಾ, ಕಾಲೇಜು, ಅಂಗನವಾಡಿ, ಸರ್ಕಾರಿ / ಖಾಸಗಿ ಕಛೇರಿಗಳು, ಬಸ್ ಡಿಪೆÇೀ ಇತ್ಯಾದಿಗಳಲ್ಲಿಯೂ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ.
ಮಾಡಬಾರದ್ದು: ಡೆಂಗಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ವೈದ್ಯ ಪದ್ಧತಿಯನ್ನು ಪಾಲಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬೇಕು. ಡೆಂಗಿ ಜ್ವರದ ಲಕ್ಷಣಗಳಿದ್ದಲ್ಲಿ ಬ್ರೂಫಿನ್ ಅಥವಾ ಇತರ ನೋವು ನಿವಾರಕಗಳನ್ನು ಸೇವಿಸಬಾರದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಗಳಿವೆ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಡೆಂಗಿ ಜ್ವರ ಚಿಕುಂಗುನ್ಯ ಪ್ರಕರಣಗಳು ಆಗದಂತೆ ಎಚ್ಚರವಹಿಸಬೇಕು. ಡೆಂಗಿ ಜ್ವರ ಹಾಗೂ ಚಿಕುಂಗುನ್ಯ ಬಗ್ಗೆ ಭಯ ಬೇಡ, ಆದರೆ ಎಚ್ಚರಿಕೆಯಿಂದ ಇರಬೇಕೆಂದು ಅವರು ತಿಳಿಸಿದ್ದಾರೆ.